ಸ್ಮಿತಾ ಬದಲಾಗಿದ್ದಾರೆ. ಸೋಲನ್ನು ಹೇಗೆ ಸ್ವೀಕರಿಸಬೇಕು, ಅದನ್ನು ಹೇಗೆ ಮೆಟ್ಟಿ ನಿಲ್ಲಬೇಕೆನ್ನುವುದನ್ನು ಕಲಿತಿದ್ದಾರೆ, ಬಲಿತಿದ್ದಾರೆ. ಹೌದು, ಕಳೆದ ನಾಲ್ಕಕ್ಕೂ ಹೆಚ್ಚು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಒಂದೇ ಒಂದು ಹಿಟ್ ಚಿತ್ರವನ್ನು ನೀಡದ ಕೃಷ್ಣ ಸುಂದರಿ ಈಗ ಪಕ್ಕದ ರಾಜ್ಯಗಳಲ್ಲಿ ಅದೃಷ್ಟ ಹುಡುಕುತ್ತಿದ್ದಾರೆ.
ಮೊದಲ ಚಿತ್ರ 'ಆತ್ಮೀಯ'ದಲ್ಲಿ ಪ್ರೌಢ ಯುವತಿಯ ಪಾತ್ರ ಮಾಡಿದ್ದ ಸ್ಮಿತಾಗೆ ನಂತರ ಅವಕಾಶ ಸಿಕ್ಕಿದ್ದು ಕವಿತಾ ಲಂಕೇಶ್ 'ಅವ್ವ'ದಲ್ಲಿ. ಕರಿಚಿರತೆ ವಿಜಯ್ ಜತೆ ಉರುಳಾಡುತ್ತಾ ಕಿಸ್ಸಿಂಗ್ ದೃಶ್ಯಗಳಲ್ಲಿ ಎಗ್ಗಿಲ್ಲದೆ ತನ್ನ ಅಭಿನಯ ಮೆರೆದರೂ ಪ್ರೇಕ್ಷಕ ಮಹಾಶಯ ತಿರುಗಿಯೂ ನೋಡಲಿಲ್ಲ.
ಈ ಹೊತ್ತಿನಲ್ಲಿ ನಿರಾಸೆಗಳು, ಹತಾಶೆಗಳು ಅವರಲ್ಲಿ ಬಂದು ಹೋಗಿವೆ. ಈಗ ಅದು ಅಭ್ಯಾಸವಾಗಿ ಹೋಗಿದೆ. ಸಮಸ್ಯೆಗಳನ್ನು ಮೀರಿ ನಿಲ್ಲುವುದು ಹೇಗೆ ಎಂಬುದನ್ನು ಅನುಭವಿಸಿ ತಿಳಿದುಕೊಂಡಿದ್ದಾರೆ. ಅದೇ ನಿಟ್ಟಿನಲ್ಲಿ ಅವರು ಪರಭಾಷಾ ಚಿತ್ರರಂಗದ ದೋಣಿಯಲ್ಲಿ ಕಾಲಿಟ್ಟಿದ್ದಾರೆ.
ತಮಿಳಿನಲ್ಲಿ ಕಾದೈ ಮತ್ತು ಪೋರ್ಕಾಲಂ ಹಾಗೂ ತೆಲುಗಿನಲ್ಲಿ ಮಾರ್ಕ್ ಎಂಬ ಚಿತ್ರಗಳಲ್ಲಿ ಸ್ಮಿತಾ ನಟಿಸುತ್ತಿದ್ದಾರೆ.
ಈ ನಡುವೆ ಕನ್ನಡದಲ್ಲೂ ಅವಕಾಶವೊಂದು ಹುಡುಕಿಕೊಂಡು ಬಂದಿದೆ. ಅದು ಈ ಹಿಂದೆ ಶಾಪ, ಜೋಕ್‌ಫಾಲ್ಸ್ ಮುಂತಾದ ಚಿತ್ರಗಳನ್ನು ನೀಡಿರುವ ಅಶೋಕ್ ಪಾಟೀಲ್‌ರ '9 ಟು 12' ಚಿತ್ರದಲ್ಲಿ. ಕಿಶೋರ್ ಈ ಚಿತ್ರದ ನಾಯಕ.
ಕಳೆದ ಎರಡೂವರೆ ವರ್ಷಗಳಿಂದ ಸಿದ್ಧಪಡಿಸಿದ ಚಿತ್ರಕಥೆಯನ್ನು ಪಾಟೀಲ್ ತನ್ನ ಸಹೋದರ ಬಿ.ಸಿ. ಪಾಟೀಲ್ ಸಹಕಾರದಿಂದ ಕ್ಯಾಮರಾದೊಳಕ್ಕೆ ತಳ್ಳುತ್ತಿದ್ದಾರೆ. ಮತ್ತೊಂದು 'ನಿಷ್ಕರ್ಷ'ವಾಗುತ್ತದೆ ಎನ್ನುವುದು ಅವರ ನಂಬಿಕೆ.
ಚಿತ್ರದಲ್ಲಿನ ತನ್ನ ಪಾತ್ರದ ಬಗ್ಗೆ ಸ್ಮಿತಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಬ್ಬ ಕಲಾವಿದೆಗೆ ತೀರಾ ಅಪರೂಪವಾಗಿ ಸಿಗುವ ಪ್ರಭಾವಿ ಪಾತ್ರವಿದು. ಚಿತ್ರದಲ್ಲಿ ನಾನು ತರಕಾರಿ ಮಾರುವ ಮಹಿಳೆ. ಈ ಸಂದರ್ಭದಲ್ಲಿ ನಡೆದ ಒಂದು ಪ್ರಸಂಗವನ್ನೂ ಹೇಳಬೇಕು. ಶೂಟಿಂಗ್ ನಡೆಯುತ್ತಿದ್ದಾಗ ಹತ್ತಿರ ಬಂದ ಪೊಲೀಸ್ ಅಧಿಕಾರಿಯೊಬ್ಬರು, 'ನೀವು ಮಂಜುಳಾ ಅವರನ್ನು ನೆನಪಿಸುತ್ತಿದ್ದೀರಿ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.
ಇದಕ್ಕೆ ಒಂದಿಷ್ಟು ಸೇರಿಸಿದ ಬಿ.ಸಿ. ಪಾಟೀಲ್, ಸ್ಮಿತಾ ಅವರು ಕನ್ನಡದ ರೇಖಾ ಎಂದು ಬೆಣ್ಣೆ ಹಚ್ಚಿದರು.
ನಾನು ಕನ್ನಡತಿ. ನಾನು ಕನ್ನಡದಲ್ಲಿ ಅರ್ಥಪೂರ್ಣ ಮತ್ತು ಪ್ರಶಂಸಾರ್ಹ ಪಾತ್ರಗಳನ್ನು ಕನ್ನಡದಲ್ಲಿ ಮಾಡಲು ಬಯಸುತ್ತಿದ್ದೇನೆ. ಅದೇ ಕಾರಣದಿಂದ ಹೆಚ್ಚು ಚೂಸಿಯಾಗಿದ್ದೇನೆ. ಆದರೆ ಕನ್ನಡದಲ್ಲಿ ಆಫರುಗಳು ಬರದೇ ಇದ್ದಾಗ ನಾನು ಸುಮ್ಮನೆ ಕೂರಬೇಕೇ? ಪರಭಾಷೆಗಳಲ್ಲಿ ನಟಿಸುವಂತೆ ಕರೆದಾಗ ನಾನು ಭೇದ-ಭಾವ ಮಾಡುವುದು ತಪ್ಪಾಗುತ್ತದೆ ಎಂದು ಜಾಣತನದ ಮಾತುಗಳನ್ನು ಕೂಡ ಸ್ಮಿತಾ ಆಡಿದ್ದಾರೆ.