ಚಿತ್ರವೊಂದು ಹಿಟ್ ಆಗಬೇಕಾದರೆ ಬರೇ ಹೀರೋಗಳು ಮತ್ತು ನಿರ್ದೇಶಕರೇ ಕಾರಣರಾಗಿರುವುದಿಲ್ಲ. ಚಿತ್ರಕಥೆ ಹೇಗಿರುತ್ತದೆ ಎನ್ನುವುದು ಮುಖ್ಯವಾಗಿರುತ್ತದೆ. ಹಾಗೆ ನೋಡಿದರೆ ನಾನು ದೊಡ್ಡ ದೊಡ್ಡ ನಾಯಕರಿಗೆ ನಾಯಕಿಯಾಗಿದ್ದೆ. ಅವೆಲ್ಲವೂ ಹಿಟ್ ಆಗಿರಲಿಲ್ಲ -- ಹೀಗೆಂದು ಹೇಳಿರುವುದು ಕ್ಯಾಮರಾ ಕಂಡಾಗಲೆಲ್ಲ ಪುಟಿದೇಳುವ ಚಿನಕುರುಳಿ ಜೆನ್ನಿ ಯಾನೆ ಜೆನಿಫರ್ ಕೊತ್ವಾಲ್.
ಹಲವು ನಿರ್ದೇಶಕರು, ನಾಯಕರ ಜತೆ ಕೆಲಸ ಮಾಡಿದ ನಂತರ ಆಕೆ ಕಂಡುಕೊಂಡಿರುವ ಸತ್ಯವೆಂದರೆ, ತಾನು ಯಾರ ಜತೆ ನಟಿಸುತ್ತೇನೋ ಅಥವಾ ಚಿತ್ರವೊಂದನ್ನು ಯಾರು ನಿರ್ದೇಶಿಸುತ್ತಾರೋ -- ಅದರ ಆಧಾರದಲ್ಲಿ ಚಿತ್ರ ಹಿಟ್ ಆಗೋದಿಲ್ಲ ಎನ್ನುವುದನ್ನು.
ಸಿನಿಮಾವೊಂದು ಗಲ್ಲಾಪೆಟ್ಟಿಗೆ ದೋಚಬೇಕಾದರೆ ಅಲ್ಲಿ ಪ್ರಮುಖವಾಗಿ ಅಗತ್ಯ ಬೀಳುವುದು ಕಥೆ-ಚಿತ್ರಕಥೆ ಹೇಗಿದೆ ಎನ್ನುವುದು. ಹಾಗಾಗಿ ನಾನು ಚಿತ್ರಕ್ಕೆ ಸಹಿ ಮಾಡುವಾಗ, ನನಗೆ ಹೀರೋ ಆಗುತ್ತಿರುವವರು ಯಾರು, ನಿರ್ದೇಶಕರು ಯಾರು ಎಂಬುದನ್ನು ಬದಿಗೊತ್ತಿ ಕಥೆ ಹೇಗಿದೆ, ಚಿತ್ರಕಥೆ ಹೇಗಿರುತ್ತದೆ ಎಂಬುದನ್ನು ನೋಡುತ್ತೇನೆ ಎಂದು ಜೆನ್ನಿಫರ್ ಹೇಳಿಕೊಂಡಿದ್ದಾರೆ.
ಇಷ್ಟೆಲ್ಲಾ ಮಾತನಾಡಲು ಕಾರಣ ಅವರ ಇತ್ತೀಚಿನ 'ಹುಲಿ' ಚಿತ್ರಕ್ಕೆ ಪ್ರೇಕ್ಷಕರು ಅತ್ಯುತ್ತಮ ಪ್ರತಿಕ್ರಿಯೆ ನೀಡಿರುವುದು. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದ ಮೂಲಕ ಖಳನಟ ಕಿಶೋರ್ ನಾಯಕನಾಗಿ ಭಡ್ತಿ ಪಡೆದಿದ್ದಾರೆ.
ಜೆನ್ನಿ ಪ್ರಕಾರ ಈ ಕಿಶೋರ್ ಸಿಕ್ಕಾಪಟ್ಟೆ ಸೀರಿಯಸ್ ಮನುಷ್ಯನಂತೆ. ತಾನು ಸೆಟ್‌ನಲ್ಲಿದ್ದಾಗಲಂತೂ ನಗುವುದನ್ನೇ ಮರೆತು ಬಿಡುವ ಜಾಯಮಾನದವರು. ಆದರೆ ತುಂಬಾ ಒಳ್ಳೆಯವರಂತೆ.
ಅದೇ ಹೊತ್ತಿಗೆ ತಾನು ಪತ್ರಿಕೆಗಳಲ್ಲಿ ಬರುವ ವಿಮರ್ಶೆಗಳಿಗಿಂತ ಹೆಚ್ಚು ಅಭಿಮಾನಿಗಳ ಪ್ರತಿಕ್ರಿಯೆಗಳಿಗೆ ಒತ್ತು ನೀಡುವ ಹುಡುಗಿ ಎಂದು ಹೇಳಿಕೊಂಡಿರುವ ಜೆನಿಫರ್, ಬಬ್ಲಿ ಪಾತ್ರಗಳನ್ನು ಮಾಡುವುದನ್ನು ನಿಲ್ಲಿಸುವುದಿಲ್ಲವಂತೆ. ಹಾಗೆ ಮಾಡಿದಲ್ಲಿ ಅಭಿಮಾನಿ ವರ್ಗವನ್ನು ಕಳೆದುಕೊಳ್ಳುವ ಭೀತಿಯೂ ಆಕೆಯಲ್ಲಿದೆ. ಗಂಭೀರ ಪಾತ್ರಗಳಲ್ಲಿ ಪ್ರೇಕ್ಷಕರು ಥಿಯೇಟರಿನತ್ತ ಕರೆಸುವ ಸಾಮರ್ಥ್ಯ ತನಗಿಲ್ಲ ಎಂದು ಮಾತ್ರ ಒಪ್ಪಿಕೊಂಡಿಲ್ಲ.
ಚಿತ್ರವೊಂದು ಯಶಸ್ವಿಯಾಗಲು ನಿರ್ದೇಶಕರೇ ಕಾರಣವಲ್ಲ ಎಂಬ ಮಾತು ಹೇಳುತ್ತಾರಾದರೂ, ಯೋಗರಾಜ್ ಭಟ್ ಮತ್ತು ಸೂರಿಯಂತಹ ಟಾಪ್ ಡೈರೆಕ್ಟರುಗಳ ವಿಚಾರ ಬಂದಾಗ ಕಣ್ಣರಳಿಸುತ್ತಾರೆ. ನನ್ನನ್ನು ಹಾಕಿಕೊಂಡು ಚಿತ್ರ ಮಾಡುವಂತೆ ನೀವೇ ಶಿಫಾರಸು ಮಾಡಿ ಎಂದು ತುಂಟ ನಗೆಯೊಂದಿಗೆ ಹೇಳುತ್ತಾರೆ.