ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಎಂದೂ ಮರೆಯಾಗದ ತಾರೆ ರಾಜ್
ತಾರಾ ಪರಿಚಯ
Feedback Print Bookmark and Share
 
ರವಿಪ್ರಕಾಶ್ ರೈ

WD
ಕನ್ನಡ ಚಿತ್ರರಂಗ ಕಂಡ ಮೇರುನಟ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಕನ್ನಡ ನಾಡಿನ ಜನತೆ ಇಂದು ಎಲ್ಲೆಡೆ ಆಚರಿಸುತ್ತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಕೊಡುಗೆಯಾಗಿ ಅವರು ನಟಿಸಿದ ಸತ್ಯಹರಿಶ್ವಂದ್ರ ಚಿತ್ರ ಇಂದು ವರ್ಣಮಯವಾಗಿ ಬಿಡುಗಡೆಗೊಳ್ಳುತ್ತಿರುವುದು ಮತ್ತೊಂದು ಸಂತಸದ ವಿಷಯ.

ಡಾ.ರಾಜ್ ಎಂದ ತಕ್ಷಣ ತಟ್ಟನೆ ನೆನಪಿಗೆ ಬರುವುದು ಅವರ ಅಭಿನಯ. ಅವರ ಅದ್ಭುತವಾದ ನಟನಾ ಕೌಶಲ್ಯದಿಂದಲೇ ಇಡೀ ಕನ್ನಡಿಗರ ಮನಸ್ಸಿನಲ್ಲಿ ಇವತ್ತಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ರಾಜ್ ಅಭಿಮಾನಿಗಳು ಇವತ್ತಿಗೂ ರಾಜ್ಕುಮಾರ್ರನ್ನು ತಮ್ಮ ದೇವರೆಂದು ಪೂಜಿಸುತ್ತಿದ್ದಾರೆಂದರೆ ಅದಕ್ಕೆ ಕಾರಣ ರಾಜ್ ಅವರ ಸೌಮ್ಯಗುಣ. ರಾಜ್ ತಮ್ಮ ಜೀವಿತಾವಧಿಯ ಕೊನೆವರೆಗೆ ಅಭಿಮಾನಿಗಳನ್ನು 'ಅಭಿಮಾನಿ ದೇವರು'ಗಳೆಂದೇ ಕರೆಯುತ್ತಿದ್ದರು. ಯಾವುದೇ ಸಂದರ್ಭದಲ್ಲೂ ಕನ್ನಡಿಗರ ಮನಸ್ಸಿಗೆ ನೋವಾಗುವಂತಹ ಮಾತನಾಡದ ರಾಜ್ ಅಪ್ಪಟ ಸಜ್ಜನಿಗ.

ರಾಜ್ ತಮ್ಮ ಅಭಿಮಾನಿಗಳಿಗೆ ಯಾವುದೇ ಗಿಮಿಕ್ ಮಾಡಲಿಲ್ಲ. ಬದಲಾಗಿ ಅವರ ರಕ್ತಗತವಾಗಿ ಬಂದ ನಟನಾಚಾತುರ್ಯದಿಂದ ಅಭಿಮಾನಿಗಳ ಮನಗೆದ್ದರು. ಇವರ ಅಭಿನಯದ ಒಂದೊಂದು ಚಿತ್ರಗಳೂ ಕೂಡಾ ಮನುಷ್ಯನ ಜೀವನಕ್ಕೆ ಪಾಠ ಹೇಳುವಂತಿದೆ.

ರಾಜ್ ನಮ್ಮೊಂದಿಗಿಲ್ಲ ಎಂದು ಕನ್ನಡ ನಾಡಿನ ಜನತೆಗೆ ಎಂದೂ ಭಾವಿಸಿಲ್ಲ. ಅಣ್ಣಾವ್ರು ಸದಾ ನಮ್ಮ ಜೊತೆಗೆ ಇದ್ದಾರೆ ಎಂಬ ಭಾವನೆ ಎಲ್ಲಾ ದಿವಸಗಳಲ್ಲಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಇರುತ್ತದೆ. ಆದ್ದರಿಂದಲೇ ಇವತ್ತಿಗೂ ಅಣ್ಣಾವ್ರು ಭಾವಚಿತ್ರಗಳು ಆಟೋಗಳಲ್ಲಿ ರಾರಾಜಿಸುತ್ತವೆ.

ಚಿತ್ರರಂಗದಲ್ಲಿ ಕಲಾವಿದರು ಕೇವಲ ಒಂದು ವರ್ಷ ಹೆಸರು ಉಳಿಸಿಕೊಳ್ಳಲು ಸಾಧ್ಯವಾಗದ ಇವತ್ತಿನ ದಿನಗಳಲ್ಲಿ ಜನ ಅಣ್ಣಾವ್ರ ಬಗ್ಗೆ ಇವತ್ತಿಗೂ ಆ ತರಹದ ಅಭಿಮಾನ ಹೊಂದಿದ್ದಾರೆಂದರೆ ರಾಜ್ ಅಭಿನಯ ಹಾಗೂ ವ್ಯಕ್ತಿತ್ವ ಹೇಗಿತ್ತೆಂಬುದನ್ನು ನೀವೇ ಯೋಚಿಸಿ. ರಾಜ್ ತಮ್ಮ ಜೀವನದುದ್ದಕ್ಕೂ ಶಿಸ್ತು-ಆದರ್ಶಗಳನ್ನು ಪಾಲಿಸಿಕೊಂಡು ಬಂದವರು. ಇವರು ಸದಾ ಮಕ್ಕಳ ಜೊತೆ ಇರಲು ಬಯಸುತ್ತಿದ್ದರು. ಒಂದು ವೇಳೆ ಮಕ್ಕಳು ತಪ್ಪು ಮಾಡಿದರೆ ಅವರಿಗೆ ಬೈಯುತ್ತಿರಲಿಲ್ಲ, ಬದಲಿಗೆ ಮೌನವಾಗುತ್ತಿದ್ದರು. ಇವರ ಮೌನವನ್ನು ಅರ್ಥೈಸಿಕೊಂಡ ಮಕ್ಕಳು ಕ್ಷಮೆ ಕೇಳಿದ ನಂತರ ರಾಜ್ ತಮ್ಮ ಹಿಂದಿನ ಮನಸ್ಥಿತಿಗೆ ಮರಳುತ್ತಿದ್ದರು. ಇದು ರಾಜ್ ಅವರು ಮಕ್ಕಳನ್ನು ತಿದ್ದುತ್ತಿದ್ದ ಸಾತ್ವಿಕ ರೀತಿ. ರಾಜ್ ಯೋಗಭ್ಯಾಸವನ್ನು ನಿರಂತರ ಮಾಡುತ್ತಾ ಬಂದವರು. ತಮ್ಮ ದೈನಂದಿನ ಕಾರ್ಯದ ನೆಪ ಹೇಳಿ ಯೋಗಾಭ್ಯಾಸವನ್ನು ಎಲ್ಲಿಯೂ ರಾಜಿ ಮಾಡಿಕೊಂಡ ವ್ಯಕ್ತಿಯಲ್ಲ.

ಅಭಿಮಾನಿಗಳನ್ನೇ ತಮ್ಮ ಅನ್ನದಾತರೆಂದು ನಂಬಿದ ವ್ಯಕ್ತಿ ರಾಜ್. ಕೆಲವೊಮ್ಮೆ ಚಿತ್ರಮಂದಿರದ ಎದುರು ಕಾರು ನಿಲ್ಲಿಸಿ ಟಿಕೆಟ್‌ಗಾಗಿ ಸಾಲು ನಿಂತ ಪ್ರೇಕ್ಷಕರನ್ನು ಕಂಡು 'ಇವರೇ ಅಲ್ವಾ ನಮಗೆ ಅನ್ನ ನೀಡುವ ಅನ್ನದಾತರು' ಎಂದು ಹೇಳುತ್ತಿದ್ದರು ರಾಜ್.

ಬೆಂಗಳೂರಿನ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಒಂದು ಫೋಟೋ ಅಂಗಡಿಯಿದೆ. ದೂರದ ಹಂಪಿಯಿಂದ ಬಂದ ಮುಸ್ಲಿಂ ಮಹಿಳೆಯೊಬ್ಬರು ರಾಜ್ ಅವರ ಪೋಟೋ ಪಡೆದು, ನನಗೆ ದೇವರು ಬೇರೆ ಅಲ್ಲ, ಇವರು ಬೇರೆ ಅಲ್ಲ. ಮನೆಯಲ್ಲಿ ಇವರ ಫೋಟೋ ಇದ್ದರೆ ಏನೋ ಒಂಥರಾ ಕಳೆ ಇರುತ್ತೆ ಎನ್ನುತ್ತಾರೆ. ಇದು ರಾಜ್ ಮೇಲಿನ ಅಭಿಮಾನಕ್ಕೆ ಸಾಕ್ಷಿ.

ಆದ್ದರಿಂದಲೇ ರಾಜ್ ಯಾವತ್ತಿಗೂ ಕನ್ನಡಿಗರ ಮನದಲ್ಲಿ ರಾಜ್ ಆಗಿಯೇ ಉಳಿದಿದ್ದಾರೆ, ಉಳಿಯುತ್ತಾರೆ.

ಏಕೆಂದರೆ ಅದು ಅಮರ ಚೇತನ. ಅಮರ ಚೇತನಕ್ಕೆ ಸಾವಿಲ್ಲ.