ಚಿನ್ಮಯ್ ಎಂಬ ಚಿನ್ನದಂಥಾ ಗಾಯಕ
ಬೆಂಗಳೂರು, ಮಂಗಳವಾರ, 12 ಫೆಬ್ರವರಿ 2008( 18:00 IST )
ಓದಿದ್ದು ಇಂಜಿನಿಯರಿಂಗ್, ಅರಸಿ ಬಂದದ್ದು ಗಾಯನ ವೃತ್ತಿ. ಇದು ನವ ಗಾಯನ ಪ್ರತಿಭೆ ಚಿನ್ಮಯ್ ಆತ್ರೇಯರವರ ಕುರಿತಾದ ಪುಟ್ಟ ಪರಿಚಯ. ಜೀ ಕನ್ನಡ ವಾಹಿನಿ ನಡೆಸುವ ಸರೆಗಮಪ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಸ್ಯಾಂಟ್ರೋ ಕಾರನ್ನು ಬಹುಮಾನವಾಗಿ ಪಡೆದ ಈ ಯುವ ಪ್ರತಿಭಾವಂತ, ಕನ್ನಡದಲ್ಲಿ ಗಾಯಕರಿಲ್ಲ ಎಂಬ ಕೊರಗನ್ನು ನೀಗುವ ಎಲ್ಲಾ ಲಕ್ಷಣಗಳನ್ನೂ ಹೊಂದಿದ್ದಾರೆ. ಅವರ ಕೆರೀಯರ್ ಗ್ರಾಫ್ ಇದನ್ನು ಸಾರಿ ಹೇಳುತ್ತಿದೆ.
ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂರವರನ್ನು ಮಾದರಿಯಾಗಿಟ್ಟುಕೊಂಡಿರುವ ಚಿನ್ಮಯ್ ಆಯ್ಕೆಯಲ್ಲೂ ವಿಶೇಷತೆಯಿದೆ. ಏಕೆಂದರೆ ಬಾಲುರವರೂ ಸಹ ಎಂಜಿನಿಯರಿಂಗ್ ಓದಿ ನಂತರ ಗಾಯನ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡವರು. ಅವರ ಹಾದಿಯಲ್ಲಿಯೇ ನಡೆಯುತ್ತಿರುವ ಚಿನ್ಮಯ್ ಮತ್ತೊಬ್ಬ ಬಾಲು ಆಗುವರೇ ಎಂಬುದನ್ನು ಕಾಲವೇ ಹೇಳಬೇಕಿದೆ.
ಸದ್ಯಕ್ಕೆ ಆಶ್ವಿನಿ ಆಡಿಯೋ ಕಂಪನಿಯ ವತಿಯಿಂದ ಒಂದು ವರ್ಷದ ಕಾಂಟ್ರಾಕ್ಟ್ ಗಾಯಕರಾಗಿ ಆಯ್ಕೆಯಾಗಿರುವ ಚಿನ್ಮಯ್ ಈಗಾಗಲೇ ಮನೋಮೂರ್ತಿಯವರ ಸಂಗೀತ ನಿರ್ದೇಶನದಲ್ಲಿ ಟ್ರಾಕ್ ಗೀತೆಯೊಂದನ್ನೂ ಹಾಡಿದ್ದಾರೆ. ಈ ಬಂಧನ ಚಿತ್ರದಲ್ಲಿ ಬರುವ ಲೆಟ್ಸ್ ಡಾನ್ಸ್ ಜತೆ ಜತೆ ಎಂದು ಪ್ರಾರಂಭವಾಗುವ ಈ ಹಾಡು ನಂತರ ರಾಜೇಶ್ ಕೃಷ್ಣನ್ ಅವರ ದನಿಯಲ್ಲಿ ಮೂಡಿ ಬಂದಿದೆ. ತೆಲುಗು ಚಿತ್ರರಂಗದಲ್ಲಿ ಚಿನ್ಮಯ್ ತಮ್ಮ ಗಾಯನ ಪ್ರತಿಭೆಯನ್ನು ಪಸರಿಸಿದ್ದಾರೆ. ಅಂದಮೈನ ಮನಸುಲು ಎಂಬ ಚಿತ್ರದಲ್ಲಿ ಹಾಡುವಂತೆ ಪ್ರೋತ್ಸಾಹಿಸಿದ್ದು ಸಂಗೀತ ನಿರ್ದೇಶಕ ಆರ್.ಪಿ.ಪಟ್ನಾಯಕ್.
ಈ ಬಂಧನ ಚಿತ್ರದಲ್ಲಿನ ಟ್ರಾಕ್ ಗಾಯನಕ್ಕೇ ಮನಸೋತ ಖ್ಯಾತ ಚಿತ್ರಸಾಹಿತಿ ಕಲ್ಯಾಣ್, ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಚಿತ್ರದಲ್ಲಿ ಹಾಡು ಹಾಡಲು ಅವಕಾಶ ಕೊಟ್ಟಿದ್ದು ಚಿನ್ಮಯ್ ಪ್ರತಿಭೆಗೆ ಸಿಕ್ಕ ಪುರಸ್ಕಾರವಾಗಿದೆ. ಗುರುರಾಜ್-ಮಂಜುಳಾ ಗುರುರಾಜ್ ದಂಪತಿಗಳು ಬೆಂಗಳೂರಿನ ಹನುಮಂತ ನಗರದಲ್ಲಿ ಸ್ಥಾಪಿಸಿರುವ ಸಾಧನಾ ಸಂಗೀತ ಶಾಲೆಯಿಂದ ಕಿರುತೆರೆ ಹಾಗೂ ಹಿರಿತೆರೆ ಪ್ರವೇಶಿಸಿರುವ ಪ್ರತಿಭೆಗಳು ಅನೇಕ. ಚಿನ್ಮಯ್ ಸಹಾ ಸಾಧನಾ ಸಂಗೀತ ಶಾಲೆಯ ಪ್ರತಿಭೆಯೇ.
ಚಿನ್ಮಯ್‌ಗೆ ಬಂದಿರುವ ಪ್ರಶಸ್ತಿ-ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಈಗಾಗಲೇ ಅಶ್ವಿನಿ ಸಂಸ್ಥೆಯ ಧ್ವನಿಸುರುಳಿಗಳಿಗೆಂದು ಡಜನ್‌ಗೂ ಮಿಕ್ಕಿದ ಹಾಡುಗಳನ್ನು ಹಾಡಿರುವ ಈತ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಸೆಮಿಫೈನಲ್ ಹಂತದವರೆಗೆ ತಲುಪಿದ್ದರು. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ರೊಂದಿಗೆ ದುಬೈನ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹಾಗೂ ಸುವರ್ಣ ಕರ್ನಾಟಕ ರತ್ನ ಪರಿಷತ್‌ನಿಂದ ಕಳೆದ ವರ್ಷ ಯುವ ಚೇತನ ಎಂಬ ಪುರಸ್ಕಾರ ಪಡೆದಿರುವುದು ಚಿನ್ಮಯ್ ಖಾತೆಯಲ್ಲಿ ಇನ್ನೂ ಹಸಿರಾಗಿವೆ.
ರತ್ನಮಾಲಾ ಪ್ರಕಾಶ್ ಹಾಗೂ ಫಯಾಜ್‌ಖಾನ್ ಅವರುಗಳ ಬಳಿಯಲ್ಲಿ ಕ್ರಮವಾಗಿ ಸುಗಮ ಸಂಗೀತ ಹಾಗೂ ಹಿಂದೂಸ್ತಾನಿ ಶಾಸ್ತ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿರುವ ಈ ಪ್ರತಿಭೆ ಮುಂದೊಂದು ದಿನ ಕನ್ನಡ ಚಿತ್ರರಂಗದ ಆಸ್ತಿಯಾಗಬಲ್ಲದು. ಹಾಗಾಗಲೆಂದು ಹಾರೈಸುವುದೇ ನಮ್ಮ ಕೆಲಸ. ಅಲ್ಲವೇ?