ಕೇಕ್ ಕತ್ತರಿಸಿ ಬಾಲಕಿಯ ಮೊಗದಲ್ಲಿ ಕೇಕೆ ತುಂಬಿದ ವಿಜಯ್
ಸೋಮವಾರ, 21 ಜನವರಿ 2008( 16:58 IST )
ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ ಕರುನಾಡಿನ ಹೆಮ್ಮೆಯ 'ಕರಿಯ' ವಿಜಯ್ ಅವರು ಹುಟ್ಟುಹಬ್ಬದ ದಿನ ಒಬ್ಬ ಬಾಲಕಿಯ ಮೊಗದಲ್ಲಿ ನಗು ಅರಳಿಸಿದ್ದಾರೆ.
ಸಿನಿಮಾ ತಾರೆಯರು ವಿಜೃಂಭಣೆಯಿಂದ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿದರೆ, ಇತ್ತೀಚಿನ ದಿನಗಳಲ್ಲಿ ಕೆಲವರು ಮಾನವೀಯ ನೆರವಿನ ಹಸ್ತ ನೀಡಿ ತಮ್ಮ ಔದಾರ್ಯ ಮೆರೆಯುತ್ತಾರೆ ಮತ್ತು ಇತರರಿಗೆ ಮಾದರಿಯಾಗುತ್ತಾರೆ. ಇಂತಹವರ ಸಾಲಿನಲ್ಲಿ ಗುರುತಿಸಿಕೊಂಡವರು ದುನಿಯಾ ವಿಜಯ್.
ಈ ನಟ ಭಾನುವಾರ ತನ್ನ 32 ನೇ ವಸಂತಕ್ಕೆ ಕಾಲಿಟ್ಟರು. ಅದು ಕನಕಪುರ ರಸ್ತೆಯ ದೊಡ್ಡ ಫಾರಂ ಹೌಸ್. ಮುಖ್ಯಮಂತ್ರಿ ಐ ಲವ್ ಯೂ ಚಿತ್ರ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ಶೂಟಿಂಗ್ ಮಧ್ಯೆ ಭಾನುವಾರ ಇಡೀ ಚಿತ್ರತಂಡಕ್ಕೆ ಬರ್ತ್‌ಡೇ ಬಾಯ್ ವಿಜಯ್‌ರನ್ನು ಅಭಿನಂದಿಸುವ ಸಂಭ್ರಮ. ಸಾಂಪ್ರದಾಯಿಕವಾಗಿ ಅಭಿಮಾನಿಗಳ ಒತ್ತಾಸೆಗೆ ಮಣಿದ ವಿಜಯ್ ಕೇಕ್ ಕತ್ತರಿಸಿಕೊಂಡರು.
ಅಷ್ಟಕ್ಕೆ ಅವರು ಸುಮ್ಮನೆ ಕೂರಲಿಲ್ಲ. 7ರ ಹರೆಯದ ಬಡ ಬಾಲಕಿಯೋರ್ವಳ ಹೃದಯ ಶಸ್ತ್ರ ಚಿಕಿತ್ಸೆಯ ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸಿದರು. ಶಸ್ತ್ರಚಿಕಿತ್ಸೆ ನಡೆದ ನಗರದ ಪ್ರಸಿದ್ಧ ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ ಮಗುವಿನ ಆರೋಗ್ಯವನ್ನು ವಿಚಾರಿಸಿದರು. ಅರುವತ್ತು ಸಾವಿರದ ಚೆಕ್ ನೀಡಿ ಬಾಲಕಿ ಬೇಗನೇ ಗುಣಮುಖವಾಗಲಿ ಎಂದು ಹಾರೈಸಿದರು.
ಇತ್ತ ಬಾಲಕಿಯ ತಂದೆ ತಾಯಿಗಳ ಮುಖದಲ್ಲಿ ಕಣ್ಣೀರು. ಮಗಳ ಚೇತರಿಕೆಗೆ ಸ್ಪಂದಿಸಿದ ವಿಜಯ್‌ಗೆ ಮನತುಂಬಿದ ಹಾರೈಕೆ. ಬರ್ತ್‌ಡೇಗಾಗಿ ಯಾರಿಗೂ ಈ ಬಾರಿ ಪಾರ್ಟಿ ನೀಡಲ್ಲ. ಅದರ ಬದಲು ಆ ಹಣವನ್ನು ಈ ರೀತಿ ವ್ಯಯಿಸಿದ್ದೇನೆ. ಈ ಬಗ್ಗೆ ನನ್ನ ಅಭಿಮಾನಿ ಸ್ನೇಹಿತರು ನನ್ನನ್ನು ಬೆಂಬಲಿಸಿದ್ದಾರೆ ಎಂದು ನಮ್ಮ ಪ್ರತಿನಿಧಿಯೊಂದಿಗೆ ವಿಜಯ್ ಅನಿಸಿಕೆ ಹಂಚಿಕೊಂಡರು.