ಗುರುತಿಸಿಕೊಳ್ಳಲು ಹಾಸ್ಯ ಪಾತ್ರಗಳೇ ಬೇಕು: ಸುಷ್ಮಾ
ಬೆಂಗಳೂರು, ಬುಧವಾರ, 19 ಡಿಸೆಂಬರ್ 2007( 15:14 IST )
ಕಾಮೆಡಿ ಪಾತ್ರಗಳನ್ನು ನಿರ್ವಹಿಸಿದರೆ ಕಾಮೆಡಿ ನಟ ಅಥವಾ ನಟಿಯಾಗಿ ಬ್ರಾಂಡ್ ಆಗಿಬಿಡುತ್ತೇವೆ ಎಂಬ ಭಯ ಕೆಲ ಕಲಾವಿದರಿಗೆ.
ಆದರೆ ಹಾಸ್ಯ ಪಾತ್ರಗಳಲ್ಲಿ ಬಹು ಬೇಗ ಗುರುತಿಸಿಕೊಳ್ಳಬಹುದು ಎನ್ನುವ ಕಲಾವಿದರ ಗುಂಪಿದೆ. ಆ ಗುಂಪಿಗೆ ಸೇರಿದವರು ಸುಷ್ಮಾ. ಖಾಸಗಿ ಚಾನೆಲೊಂದರಲ್ಲಿ ಪ್ರಸಾರವಾಗುತ್ತಿದ್ದ ಕುಬೇರಪ್ಪ ಅಂಡ್ ಸನ್ಸ್ ಹಾಸ್ಯ ಧಾರಾವಾಹಿ ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗುತ್ತು.
ನಟ ಮೈನಾ ಚಂದ್ರು ನಿರ್ದೇಶನದ ಧಾರಾವಾಹಿಯಲ್ಲಿ ಸೊಪ್ಪಮ್ಮ ಸೊಪ್ಪು ಎಂದು ಕಣ್ಣು ಹೊಡೆಯುತ್ತಿದ್ದ ರುಕ್ಕು ಪಾತ್ರದಲ್ಲಿ ಸುಷ್ಮಾ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಚಲನಚಿತ್ರ ನಟಿಯಾಗಬೇಕೆಂಬ ಆಸೆ ಹೊತ್ತಿದ್ದ ಸುಷ್ಮಾಗೆ ಮೊದಲು ಕಿರುತೆರೆಯಲ್ಲಿ ಅವಕಾಶಗಳು ಲಭಿಸಿದವು.
ಮೂಲತಃ ಉಡುಪಿಯವರಾದ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಸುಷ್ಮಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬಿಕಾಂ ಮುಗಿಸಿರುವ ಆಕೆಗೆ ಕರೆಸ್ಪಾಂಡೆನ್ಸ್ ಸಿಎ ಒದುವ ಗುರಿ ಇದೆ. ಕಾಲೇಜು ದಿನಗಳಲ್ಲಿ ಸ್ಟೇಜ್ ಷೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುಷ್ಮಾ ಉಪೇಂದ್ರ ಅಭಿನಯದ ಗೌರಮ್ಮ ಚಿತ್ರದ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡರು.
ನಂತರ ಗಿರಿ ಚಿತ್ರದಲ್ಲಿ ನಾಯಕಿಯ ಸ್ನೇಹಿತೆಯ ಪಾತ್ರ. ಮುಂದೆ ತುಳಸಿ, ಉತ್ಸವ್ ಮತ್ತಿತರ ಧಾರಾವಾಹಿಗಳಲ್ಲಿ ಅಭಿನಯಿಸಿದರು. ಪ್ರಸ್ತುತ ಅನುಪಮ, ಪಾಂಡು ಐ ಲವ್ ಯು, ಮಣ್ಣಿನ ಋುಣ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿದ್ದು ಸುಮಾರು 1200ಕ್ಕೂ ಹೆಚ್ಚು ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನನ್ನ ಮಾತು ಹಾಗೂ ಬಾಡಿ ಲಾಂಗ್ವೇಜ್ ಹಾಸ್ಯ ಪಾತ್ರಗಳಿಗೆ ಹೆಚ್ಚು ಒಗ್ಗುತ್ತದೆ. ಅಲ್ಲದೆ ಹಾಸ್ಯ ಪಾತ್ರಗಳನ್ನು ಪ್ರೇಕ್ಷಕರು ಬಹುಬೇಗ ಗುರುತಿಸುತ್ತಾರೆ ಎನ್ನುತ್ತಾರೆ ಸುಷ್ಮಾ. ಈಗ ಅವರು ಕಿರುತೆರೆ ಹಾಗೂ ಹಿರಿತೆರೆಗಳೆರಡರಲ್ಲೂ ಸುಷ್ಮಾ ಬ್ಯುಸಿಯಾಗಿದ್ದಾರೆ.