ಚಂಡ ಚಿತ್ರದಲ್ಲಿ ಅಭಿನಯಿಸಿದ ಶುಭಾ ಪೂಂಜಾ ಮತ್ತು ವಿಜಯ್ ಕುರಿತು ಕೆಲ ಪತ್ರಿಕೆಗಳು ಗಾಸಿಪ್ ಬರೆದ ಬಗ್ಗೆ ಶುಭಾ ಬೇಜಾರು ಮಾಡಿಕೊಂಡಿದ್ದರು. ಅವರ ಜೊತೆ ಸಣ್ಣ ಸಂದರ್ಶನ:
ನಿಮ್ಮ ಊರು ಯಾವುದು ?
ನಾನು ಮೂಲತಃ ಮಂಗಳೂರಿನ ಹುಡುಗಿ. ಓದಿದ್ದು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ. ಆದರೂ ಕನ್ನಡ ಅಷ್ಟಕ್ಕಷ್ಟೇ. ಈಗ ನನ್ನ ಕನ್ನಡ ಸುಧಾರಿಸುತ್ತಿದೆ.
ನಿಮ್ಮ ಚಿತ್ರರಂಗ ಪ್ರವೇಶ ಹೇಗಾಯಿತು?
ನಮ್ಮ ಅಪ್ಪನಿಗೆ ನಾನು ಈ ಕ್ಷೇತ್ರಕ್ಕೆ ಬರುವುದೇ ಇಷ್ಟವಿರಲಿಲ್ಲ. ನನ್ನ ಗೆಳತಿಯರೆಲ್ಲಾ ಪಿಯುಸಿ ಮುಗಿದಂತೆ ಅವರವರ ಕ್ಷೇತ್ರ ಆರಿಸಿಕೊಂಡರು. ನಾನು ನಟನೆಯಲ್ಲಿ ತರಬೇತಿ ಪಡೆಯುತ್ತೇನೆ ಎಂದಾಗ ಅಪ್ಪ ಸತರಾಂ ಒಪ್ಪಲಿಲ್ಲ. ಕೊನೆಗೆ ಮಾಡೆಲಿಂಗ್ ಹಾಗೂ ರಾಂಪ್ ಷೋಗಳಲ್ಲಿ ಭಾಗವಹಿಸಿದೆ. ತಮಿಳುನಾಡಿನ ಖಜಾನ ಜ್ಯುಯೆಲರ್ಸ್‌ಗೆ ನಾನು ರೂಪದರ್ಶಿಯಾದಾಗ ಆ ರಾಜ್ಯದಾದ್ಯಂತ ನನ್ನ ವಿನೈಲ್ ಪೋಸ್ಟರ್‌ಗಳು ರಾರಾಜಿಸಿದವು. ಅದರಿಂದಲೇ ಶಿವಾಜಿ ಗಣೇಶನ್ ಅವರ ಮೊಮ್ಮಗ ಜ್ಯೂನಿಯರ್ ಶಿವಾಜಿಗೆ ಮಚ್ಚ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದೆ. ಧ್ಯಾನ್ ಅಭಿನಯದ ಜಾಕ್ಪಾಟ್ ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ಇಬ್ಬರ ನಾಯಕಿಯರ ಜೊತೆ ಕಾಣಿಸಿಕೊಂಡಿದ್ದರಿಂದ ನಾಯಕಿಯಾಗಿ ಅದು ಮೊದಲ ಚಿತ್ರ ಎಂದು ಹೇಳಲಾಗದು. ಕನ್ನಡದಲ್ಲಿ ಇತ್ತೀಚಿಗೆ ಬಿಡುಗಡೆಯಾದ ಚಂಡ ನಾನು ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಚಿತ್ರ..
ಅಭಿನಯದಲ್ಲಿ ತರಬೇತಿ ಪಡೆದಿದ್ದಿರಾ?
ಇಲ್ಲ. ಸಿನೆಮಾದಲ್ಲಿ ನಟಿಸುವುದರಿಂದಲೇ ಹೆಚ್ಚು ಅಭಿನಯ ಕಲಿಯಬಹುದು. ಯಾಕೆಂದರೆ ಅಲ್ಲಿ ದೊಡ್ಡ ದೊಡ್ಡ ಕಲಾವಿದರಿರುತ್ತಾರೆ.
ನಿಮ್ಮ ಮುಂದಿನ ಯೋಜನೆಗಳೇನು ?
ನನ್ನ ಮುಂದಿರುವ ಗುರಿ ಎಂದರೆ ದೊಡ್ಡ ಕಲಾವಿದೆಯಾಗಿ ರೂಪುಗೊಳ್ಳುವುದು. ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುವಾಸೆ ಇದೆ.
ಮೊಗ್ಗಿನ ಮನಸು ಚಿತ್ರದಲ್ಲಿ ನಾಲ್ವರು ನಾಯಕಿಯರಿದ್ದಾರೆ.
ಆದರೂ ಆ ಪಾತ್ರವನ್ನು ಏಕೆ ಒಪ್ಪಿಕೊಂಡಿರಿ ?
ಈ ನಡುವೆ ನಾಯಕಿ ಪ್ರಧಾನ ಚಿತ್ರಗಳು ಬರುವುದು ಕಡಿಮೆಯಾಗಿದೆ. ಈ ಚಿತ್ರದಲ್ಲಿ ನಾಲ್ವರು ನಟಿಯರು ಪ್ರಧಾನ ಪಾತ್ರ ವಹಿಸಿದ್ದರೂ ನನಗೆ ದೊರೆತಿರುವ ಪಾತ್ರ ಹೃದಯಕ್ಕೆ ಹತ್ತಿರವಾದದ್ದು. ದುಡ್ಡಿಗಿಂತ ಪಾತ್ರ ಮುಖ್ಯ ಎಂದು ನಂಬಿದವಳು ನಾನು.