ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಹೊಸ ತಾರೆಯ ಪರಿಚಯ
ತಾರಾ ಪರಿಚಯ
Feedback Print Bookmark and Share
 
ನಿಮಗೆ ಅಚ್ಯುತ್ ಕುಮಾರ್ ಗೊತ್ತೇನ್ರೀ? ಅಂತ ಯಾರನ್ನಾದರೂ ಕೇಳಿದರೆ, ಯಾವ ಅಚ್ಯುತ ಕುಮಾರ್ ಎಂದು ಜನ ಹುಬ್ಬೇರಿಸುತ್ತಾರೆ. ಅದೇ, ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯ ರಂಗಣ್ಣಾ.. ಅಂತ ಅಂದು ನೋಡಿ, ಜನರ ಕಣ್ಣು ಅರಳದಿದ್ದರೆ ಕೇಳಿ. ಹೀಗೆ, ರಂಗಣ್ಣ, ಆಯಿಲ್ ಕುಮಾರ್, ಪ್ರಭಾಕರ್, ಶಾಸ್ತ್ತ್ರಿ ಎಂಬ ಪಾತ್ರಗಳ ಹೆಸರುಗಳಿಂದಲೇ ಗುರುತಿಸಲ್ಪಡುತ್ತಿರುವವರು ಅಚ್ಯುತ್ ಕುಮಾರ್.

ಅಚ್ಯುತ್, ಅಪ್ಪಟ ರಂಗ ಪ್ರತಿಭೆ; ನೀನಾಸಂ ಪ್ರಾಡಕ್ಟು. ಅಲ್ಲಿ ಕಲಿತದ್ದನ್ನು ಕಾರಿಕೊಳ್ಳಲು ಮೊದಲು ಅವಕಾಶ ದೊರೆತದ್ದು ಗೃಹಭಂಗ ಧಾರಾವಾಹಿಯಲ್ಲಿ. ಅದು ಪ್ರಾರಂಭವಷ್ಟೇ, ನಂತರದ್ದೆಲ್ಲಾ ಇತಿಹಾಸ.

ಗೃಹಭಂಗದ ಪಾತ್ರ ದಿನೇ ದಿನೇ ಜನಪ್ರಿಯವಾದಾಗ ಮೂಡಲಮನೆ ಹಾಗೂ ಗುಪ್ತಗಾಮಿನಿ ಧಾರಾವಾಹಿಗಳಲ್ಲೂ ಅಪರೂಪದ ಪಾತ್ರಗಳು ಸಿಕ್ಕವು ಅಚ್ಯುತ್‌ಗೆ. ಸದುಪಯೋಗಪಡಿಸಿಕೊಂಡುಬಿಟ್ರು ಕಣ್ರೀ ಇವರು. ಅದೇ ಜನಪ್ರಿಯತೆಯನ್ನು ಹಿರಿತೆರೆಯಲ್ಲೂ ಬಳಸಿಕೊಳ್ಳಲು ಬಯಸಿದಾಗ ಹೊರಬಂದದ್ದೇ ಬಿಸಿ ಬಿಸಿ ಹಾಗೂ ಒಂದು ಪ್ರೀತಿಯ ಕಥೆ ಚಿತ್ರಗಳು. ಆದರೆ ಅವು ಅಷ್ಟಾಗಿ ಜನಪ್ರಿಯಗೊಳ್ಳಲಿಲ್ಲ. ಸೋ, ಬ್ಯಾಕ್ ಟು ದ ಪೆವಿಲಿಯನ್ ಎನ್ನುವಂತೆ ಕಿರುತೆರೆಗೇ ಮರಳಿ ಮತ್ತಷ್ಟು ಗಟ್ಟಿಯಾದರು. ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯಲ್ಲಿ ಲಾಯರ್ ರಂಗಣ್ಣ ಪಾತ್ರಧಾರಿಯಾಗಿ ಅವರ ಹಾಸ್ಯಮಯ ಪಾತ್ರನಿರ್ವಹಣೆ ಎಷ್ಟು ಜನಮೆಚ್ಚುಗೆ ಪಡೆಯಿತೆಂದರೆ, ಮರುದಿನದ ಎಪಿಸೋಡ್‌ಗೆ ಜನ ಕಾದು ಕೂರುವಷ್ಟು.

ಅಷ್ಟು ಹೊತ್ತಿಗೆ ಬಂತಲ್ಲ ಪತ್ರಕರ್ತ ಅಗ್ನಿ ಶ್ರೀಧರ್ ಆಹ್ವಾನ. 80ರ ದಶಕದ ಭೂಗತ ಲೋಕದ ವಸ್ತುವನ್ನಿಟ್ಟುಕೊಂಡು ತಾವು ನಿರ್ಮಿಸ ಹೊರಟಿದ್ದ ಆ ದಿನಗಳು ಚಿತ್ರದ ಆಯಿಲ್ ಕುಮಾರ್ ಈ ತರಲೆ ಲಾಯರ್‌ನಲ್ಲಿ ಅವರು ಕಂಡರು ಎನಿಸುತ್ತದೆ. ಪಾತ್ರವೂ ಸತ್ವಪೂರ್ಣವಾಗಿ, ಸಮರ್ಥವಾಗಿ ಮೂಡಿ ಬಂತು. ಅದರ ಫಲ ಈಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ ಅಚ್ಯುತ್‌ಕುಮಾರ್.

ಯಶಸ್ಸಿನ ಕ್ಷಣಗಳು ಬರಲು ಪ್ರಾರಂಭಿಸಿದರೆ ಹಿಂಡು ಹಿಂಡಾಗಿ ಬರುತ್ತದೆ ಎಂಬುದಕ್ಕೆ ಅವರ ಕೈನಲ್ಲಿ ಈಗ ಇರುವ ಚಿತ್ರಗಳೇ ಸಾಕ್ಷಿ. ಮುಖ್ಯಮಂತ್ರಿ ಐ ಲವ್ ಯೂ, ಮೊಗ್ಗಿನ ಮನಸ್ಸು, ಗುಬ್ಬಚ್ಚಿಗಳು ಹಾಗೂ ಸ್ಲಂ ಬಾಲ ಇವೇ ಮೊದಲಾದವುಗಳಲ್ಲಿ ಪ್ರತಿಬೆ ತೋರುವ ಅವಕಾಶ ಅವರಿಗೆ ಈಗ ಲಭ್ಯವಾಗಿದೆ. ಅಷ್ಟಕ್ಕೂ ಪ್ರತಿಭೆ ಯಾರೊಬ್ಬರ ಸ್ವತ್ತೂ ಅಲ್ಲ. ಅಲ್ಲವೇ?