ರಾಜ್ಯದ ನೆರೆ ಪೀಡಿತ ಹದಿನೈದು ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿ ಜೆಡಿಎಸ್, ಸೋಮವಾರ ವಿಧಾನಸಭೆ ಕಲಾಪದಲ್ಲಿ ಗಂಭೀರವಾಗಿ ಆರೋಪಿಸಿದೆ.
ನಿಯಮ 60ರ ಅಡಿ ನಿಲುವಳಿ ಸೂಚನೆ ಮೇಲೆ ನೆರೆ ಪರಿಹಾರದ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಮುಂದಾದರು.
ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡಿದ ರೇವಣ್ಣ, ನೆರೆ ಸಂತ್ರಸ್ಥರ ನೆರವಿಗೆ ಹೋಗಬೇಕಾದ ಆಡಳಿತ ಪಕ್ಷ ಒಳಜಗಳ ಹಾಗೂ ಅಧಿಕಾರಕ್ಕಾಗಿ ರೆಸಾರ್ಟ್ ರಾಜಕೀಯ ಮಾಡಿ ಆಡಳಿತ ಶೂನ್ಯಾವಸ್ಥೆಗೆ ತಲುಪುವಂತೆ ಮಾಡಲಾಗಿದೆ ಎಂದು ಆರೋಪಿಸಿದರು.
ನೆರೆ ಪರಿಹಾರ ನಿಧಿಗೆ ಲೆಕ್ಕವಿಲ್ಲದಷ್ಟು ದೇಣಿಗೆ ಬಂದಿದೆ ಆದರೆ ಅದನ್ನು ಬಿಜೆಪಿ ಸರಿಯಾಗಿ ಹಂಚಿಲ್ಲ. ಇದೀಗ ಜನರು ಬೀದಿಯಲ್ಲಿ ವಾಸ ಮಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ರೇವಣ್ಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.