ಪ್ರತಿ ಕನ್ನಡಿಗನ ಮನೆಮನದಲ್ಲಿ ತಮ್ಮ ಚಿತ್ರಗಳ ಮೂಲಕ ಕಣ್ಣೀರ ಕೋಡಿ ಹರಿಸಿದ ನಟಿ ಶ್ರುತಿ ಮೊನ್ನೆ ಮೊನ್ನೆ ತಮ್ಮ ಪತಿ ಮಹೇಂದರ್‌ಗೆ ವಿಚ್ಛೇದನ ನೀಡಿದ್ದು ಹಳೇ ಕಥೆ. ಅದರ ಬೆನ್ನಿಗೇ ಪತ್ರಕರ್ತ, ಚಿತ್ರ ನಿರ್ದೇಶಕ ಚಂದ್ರಚೂಡ ಉರುಫ್ ಚಕ್ರವರ್ತಿಯ ಕೈ ಹಿಡಿದುಕೊಂಡು ಗಾಂಧಿನಗರಿಯಲ್ಲಿ ಸುದ್ದಿ ಮಾಡಿದ್ದೂ ಕೂಡಾ ಈಗ ತಣ್ಣಗಾದ ವಿಷಯ. ಈಗ ಮತ್ತೊಂದು ಸುದ್ದಿ ಹೊರಬಂದಿದೆ.
ಶ್ರುತಿ ಅವರ ಈ ಹೊಸ ಸಂಗಾತಿಯಾದ ಚಕ್ರವರ್ತಿ/ ಚಂದ್ರಚೂಡ, ಶ್ರುತಿಗೆ ಜನ್ಮದಿನದ ಉಡುಗೊರೆಯಾಗಿ ಪರಮಾತ್ಮನನ್ನೇ ಕಾಣಿಕೆಯಾಗಿ ನೀಡುತ್ತಿದ್ದಾರಂತೆ! ಗಾಬರಿಯಾಗಬೇಡಿ. ವಿಷಯ ಇಷ್ಟೇ. ಶ್ರುತಿಯ ಜನ್ಮದಿನವಾದ ಸೆಪ್ಟೆಂಬರ್ 18ಕ್ಕೆ ಚಕ್ರವರ್ತಿ ತನ್ನ ಮತ್ತೊಂದು ಚಿತ್ರ 'ಪರಮಾತ್ಮ'ದ ಮಹೂರ್ತ ಇಟ್ಟುಕೊಂಡಿದ್ದಾರಂತೆ. ಆ ಮೂಲಕ ಪರಮಾತ್ಮನ್ನು ಶ್ರುತಿಗೆ ಅರ್ಪಿಸುತ್ತಿದ್ದಾರೆ ಚಕ್ರವರ್ತಿ. ಅಷ್ಟೇ ಅಲ್ಲ, ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಶ್ರುತಿಯೊಂದಿಗೆ ಚಕ್ರವರ್ತಿ ಅಭಿನಯಿಸಲಿದ್ದಾರೆ ಕೂಡಾ!
MOKSHA
ಈಗಾಗಲೇ ಚಕ್ರವರ್ತಿ ಜನ್ಮ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದನ್ನು ಆನೇಕಲ್ ಬಾಲರಾಜ್ ನಿರ್ಮಿಸುತ್ತಿದ್ದಾರೆ. ಈಗ ಜನ್ಮ ಸದ್ಯಕ್ಕೆ ಅರ್ಧದಲ್ಲೇ ನಿಂತಿದೆ. ಅಷ್ಟರಲ್ಲಿ ಚಕ್ರವರ್ತಿ ಇನ್ನೊಂದು ಚಿತ್ರ ಪರಮಾತ್ಮದ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಸಂಭಾಷಣೆ, ಕಥೆ, ಚಿತ್ರಕಥೆಯನ್ನು ಸ್ವತಃ ಚಕ್ರವರ್ತಿ ಅವರೇ ಬರೆದಿದ್ದು ನಿರ್ದೇಶನವನ್ನು ಚಕ್ರವರ್ತಿಯೇ ನಿಭಾಯಿಸಲಿದ್ದಾರೆ. ನಿರ್ಮಾಣ ಜವಾಬ್ದಾರಿಯನ್ನು ಜಿ ಎಂ ರೆಡ್ಡಿ ಹೊತ್ತಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಗೂ ಚಕ್ರವರ್ತಿ ಅಭಿನಯಿಸಲಿದ್ದಾರೆ. ಹೊಸ ಮುಖಗಳನ್ನು ನಾಯಕ ನಾಯಕಿಯರಾಗಿ ಆಯ್ಕೆ ಮಾಡಲಾಗುತ್ತದೆ. ಚಿತ್ರದ ಉಳಿದ ತಾರಾಗಣ ಇನ್ನೂ ಅಂತಿಮಗೊಳಿಸಲಾಗಿಲ್ಲವಂತೆ.