ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಟಸಾರ್ವಭೌಮ 'ರಾಜ್' ಐದನೇ ಪುಣ್ಯತಿಥಿ (Dr. Raj Kumar | Gubbi Karnataka Films | Bedara Kannappa | Shabda vedhi)
PR
ನಟಸಾರ್ವಭೌಮ, ಗಾನ ಗಂಧರ್ವ ಎಂದೇ ಖ್ಯಾತರಾಗಿರುವ ಕನ್ನಡದ ಮುತ್ತು ಡಾ.ರಾಜ್ ಕುಮಾರ್ ನಮ್ಮನ್ನಗಲಿ ಇದೇ ಏಪ್ರಿಲ್ 12ಮಂಗಳವಾರಕ್ಕೆ ಐದು ವರ್ಷಗಳೇ ಸಂದಿವೆ. ಭೌತಿಕವಾಗಿ ಅವರು ನಮ್ಮನ್ನು ಅಗಲಿ ಐದು ವರ್ಷಗಳೇ ಕಳೆದಿವೆಯಾದರೂ, ಒಬ್ಬ ನಟನಾಗಿ, ಹಾಡುಗಾರನಾಗಿ ಹಾಗೂ ಕನ್ನಡಿಗನಾಗಿ ಇಂದಿಗೂ ಅವರು ಕನ್ನಡಿಗರ ಹೃದಯದಲ್ಲಿದ್ದಾರೆ.

ಗುಬ್ಬಿ ಕರ್ನಾಟಕ ಫಿಲಮ್ಸ್‌ನಿಂದ ನಿರ್ಮಾಣವಾದ 'ಬೇಡರ ಕಣ್ಣಪ್ಪ' ಅಂದಿಗೂ ಇಂದಿಗೂ ಹಸಿರೇ. ಅಲ್ಲಿ 'ಶಿವಪ್ಪಾ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವಾ....' ಹಾಡಿಗೆ ರಾಜ್ ಕುಮಾರ್ ಅಭಿನಯಿಸಿದ್ದನ್ನು ಮರೆಯುವ ಹಾಗಿಲ್ಲ. ಈ ನಾಂದೀಗೀತೆಯೊಂದಿಗೆ ಶುರುವಾದ ಅಣ್ಣಾವ್ರ ಚಿತ್ರರಂಗದ ಜೈತ್ರ ಯಾತ್ರೆ ದ್ವಿಶತ ಚಿತ್ರಗಳಲ್ಲಿ ನಟಿಸುವ ವರೆಗೂ ವಿರಮಿಸಲಿಲ್ಲ.

'ಬೇಡರ ಕಣ್ಣಪ್ಪ'ನಿಂದ ಹಿಡಿದು 'ಶಬ್ದವೇಧಿ'ವರೆಗೆ ಬರೋಬ್ಬರಿ 205ಚಿತ್ರಗಳಲ್ಲಿ ಅಭಿನಯಿಸಿದ್ದರು ಡಾ. ರಾಜ್ ಕುಮಾರ್.

ಅಪ್ಪ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರ ಪುತ್ರ ಮುತ್ತುರಾಜು ಮೊತ್ತ ಮೊದಲು ಬಣ್ಣ ಹಚ್ಚಿದ್ದು ಶ್ರೀನಿವಾಸನಾಗಿ. ಸ್ವತಃ ತಂದೆಯೇ ಮಗನಿಗೆ ಬಣ್ಣಹಚ್ಚಿ ಶ್ರೀನಿವಾಸನಾಗಿ ಬಿಂಬಿಸಿದ್ದರು. ಅಲ್ಲಿಂದ ಶುರುವಾದ ಬಣ್ಣದ ಬದುಕು ಯಶಸ್ಸಿನ ಶಿಖರದ ಉತ್ತುಂಗಕ್ಕೇರಿತು. ಅಭಿಮಾನಿಗಳ ಪಾಲಿಗೆ ದೇವರಾದರು ರಾಜ್‌ಕುಮಾರ್.

ಹಿಂದಿನಿಂದಲೂ ಬಲ್ಲ ಮುತ್ತುರಾಜನನ್ನು ಮೊದಲ ಬಾರಿಗೆ 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ನಾಯಕನನ್ನಾಗಿ ಮಾಡಿದ ನಿರ್ದೇಶಕ ಎಚ್.ಎಲ್.ಎನ್.ಸಿಂಹ ಹೊಸದಾಗಿ ನಾಮಕರಣ ಮಾಡಿ ರಾಜ್ ಕುಮಾರನನ್ನಾಗಿಸಿದರು. ಅಲ್ಲಿಂದೀಚೆ ಕನ್ನಡ ಚಿತ್ರರಂಗಕ್ಕೆ ರಾಜ್ ಕುಮಾರ್ ಆಗಿಯೇ ಬೆಳೆದರು. ತನ್ನ ಪೂರ್ತಿ ಜೀವನವನ್ನು ಕನ್ನಡಕ್ಕಾಗಿಯೇ ಮುಡಿಪಾಗಿಟ್ಟರು ಡಾ.ರಾಜ್. ಕನ್ನಡವಲ್ಲದೆ ಬೇರಾವ ಭಾಷೆಯ ಚಿತ್ರಗಳಲ್ಲೂ ಅವರು ಅಭಿನಯಿಸಲಿಲ್ಲ. ಇದು ಮೇರು ನಟನ ಅದಮ್ಯ ಕನ್ನಡಾಭಿಮಾನ.

ವರನಟ ರಾಜ್ ಕುಮಾರ್ ಐದನೇ ಪುಣ್ಯ ಸ್ಮರಣೆಯ ಅಂಗವಾಗಿ ಅಭಿಮಾನಿಗಳಿಂದ ರಾಜ್ಯಾದ್ಯಂತ ಸ್ಮರಣಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕನ್ನಡ ಪರ ಸಂಘಟನೆಗಳು ವರನಟನಿಗೆ ಭಾವಾಂಜಲಿ, ಪುಷ್ಪಾಂಜಲಿ ಅರ್ಪಿಸಿದುವು.

ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿನ ಡಾ. ರಾಜ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳ ದಂಡೇ ಹರಿದು ಬಂತು. ರಾಜ್ ಕುಟುಂಬ ಮಂಗಳವಾರ ಮುಂಜಾನೆ ಅಪ್ಪಾಜಿ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿತು. ಮಧ್ಯಾಹ್ನ ಅಲ್ಲಿ ಅನ್ನದಾನವನ್ನು ಏರ್ಪಡಿಸಲಾಗಿತ್ತು. ಅದೇ ರೀತಿ ರಾಜ್ ಕುಮಾರ್ ನಿವಾಸದಲ್ಲೂ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು.

ಈ ಸಂಧರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ನಾವು ಈ ರೀತಿ ಪುಣ್ಯತಿಥಿ ಹಮ್ಮಿಕೊಂಡಿರುವುದು ಎಲ್ಲರೂ ರಾಜ್ ಅವರನ್ನು ನೆನೆಸಿಕೊಳ್ಳಲಿ ಎಂದಲ್ಲ. ಆ ಪುಣ್ಯದಿನದಂದು ಎಲ್ಲರಿಗೂ ಅನ್ನಸಂತರ್ಪಣೆ ಮಾಡಿದಂತಾಗುತ್ತದಲ್ಲಾ ಎಂದು. ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡಿ ಹೋದರೆ ಅದುವೇ ನಮಗೆ ಸಮಾಧಾನ ಎಂದರು.
ಇವನ್ನೂ ಓದಿ