ಆಡ್ವಾಣಿ ಎದುರು ಸಿಂಗ್ ಭಿಷ್ಮನೆದುರು ಶಿಖಂಡಿಯಂತೆ: ಆರೆಸ್ಸೆಸ್
ನವದೆಹಲಿ, ಬುಧವಾರ, 2 ಸೆಪ್ಟೆಂಬರ್ 2009( 10:44 IST )
ಬಿಜೆಪಿಯ ಆಂತರಿಕ ವಿಚಾರಗಳನ್ನು ಅದುವೆ ಪರಿಹರಿಸಿಕೊಳ್ಳಲಿ, ನಾವು ಇದರಲ್ಲಿ ತಲೆ ಹಾಕುವುದಿಲ್ಲ ಎಂದಿದ್ದ ಆರ್ಎಸ್ಎಸ್, ಇದೀಗ ಲೋಕಸಭಾ ಚುನಾವಣೆಯಲ್ಲಿ ಆಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂಬದಾಗಿ ಬಿಂಬಿಸಿರುವುದೇ ತಪ್ಪಾಯಿತು ಎಂದು ದೂರಿದೆ.
ಆಡ್ವಾಣಿ ಅವರನ್ನು ಕೇಂದ್ರವಾಗಿರಿಸಿಕೊಂಡು ಪ್ರಚಾರ ಮಾಡಿರುವುದೇ ಪಕ್ಷಕ್ಕೆ ಏಟು ನೀಡಿತು. ಇದರ ಲಾಭ ಪಡೆದ ಕಾಂಗ್ರೆಸ್ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಿದ್ದು, "ಯುವಶಕ್ತಿ - ಹಳೆ ತಲೆಮಾರಿನ ಸಮರ" ಎಂದು ಮತದಾರನ ಮನವರಿಕೆ ಮಾಡುವಲ್ಲಿ ಯಶಸ್ವಿಯಾಯಿತು ಎ0ದು ಆರ್ಎಸ್ಎಸ್ ಹೇಳಿದೆ. ಅದು ತನ್ನ ಮುಖವಾಣಿ ಪಾಂಚಜನ್ಯದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆಡ್ವಾಣಿ ಎದುರಿಗೆ ಮನಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ಬಳಸಿಕೊಂಡಿರುವ ಪರಿಯನ್ನು, ಮಹಾಭಾರತದಲ್ಲಿ ಭೀಷ್ಮ ಪಿತಾಮಹನ ಎದುರಿಗೆ ಶಿಖಂಡಿಯನ್ನು ಬಳಸಿಕೊಂಡಂತೆ ಎಂದು ಲೇಖನದಲ್ಲಿ ತುಲನೆ ಮಾಡಲಾಗಿದೆ. ಸಂಘದ ಹಿರಿಯ ಮುಖಂಡ ದೇವೇಂದ್ರ ಸ್ವರೂಪ್ ಈ ಲೇಖನವನ್ನು ಬರೆದಿದ್ದು, ಚುನಾವಣೆಗೆ ಮುನ್ನ ಆಡ್ವಾಣಿ ಅವರು ತಮ್ಮ ಆತ್ಮಚರಿತ್ರೆಯನ್ನು ಹಲವಾರು ಭಾಷೆಗಳಿಗೆ ಅನುವಾದ ಮಾಡಿಸಿ ಅದನ್ನು ವಿಜೃಂಭಣೆಯಿಂದ ಬಿಡುಗಡೆ ಮಾಡಿಸಿರುವುದನ್ನೂ ಅವರು ಕಟುವಾಗಿ ಟೀಕಿಸಿದ್ದಾರೆ.