ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದಿ-ಇಂಗ್ಲಿಷಿನಿಂದಾಗಿ ಮಾತೃ ಭಾಷೆ ಅವಸಾನದಂಚಿನಲ್ಲಿದೆ! (Endangered Languages | Mother Tongue | Regional Languages | English | Hindi)
Feedback Print Bookmark and Share
 
ನವದೆಹಲಿ: ಪ್ರಾಥಮಿಕ ಹಂತದಲ್ಲೇ ಮಾತೃಭಾಷೆ ಕಡ್ಡಾಯವಾಗಿ ಬೋಧಿಸಬೇಕೆಂಬ ಕನ್ನಡಾಭಿಮಾನಿಗಳ ಹೋರಾಟಕ್ಕೆ ಮತ್ತು ಅವರ ಆತಂಕಕ್ಕೆ ಇಲ್ಲಿ ಪುಷ್ಟಿ ದೊರೆತಿದೆ. ದೇಶದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಆಧಾರಿತ ಶಿಕ್ಷಣ ವ್ಯವಸ್ಥೆ ಹೆಚ್ಚುತ್ತಿದ್ದು, ಇದರಿಂದಾಗಿ ಮಾತೃಭಾಷೆಗಳು ವಿನಾಶದಂಚಿನಲ್ಲಿದ್ದು, ತಮ್ಮ ಮಾತೃಭಾಷೆಯ ಅನನ್ಯತೆಯನ್ನು ಉಳಿಸಿಕೊಳ್ಳುವುದು ಪೋಷಕರ ಕೈಯಲ್ಲಿದೆ ಎಂದು ತಜ್ಞರು ಶುಕ್ರವಾರ ಎಚ್ಚರಿಸಿದ್ದಾರೆ. ಅವರ ಪ್ರಕಾರ, ಭಾರತ ಸುಮಾರು 196 ಭಾಷೆಗಳು ಅವಸಾನದಂಚಿನಲ್ಲಿವೆ.

ಭಾಷಾತಜ್ಞರಾಗಿ ನಾವು ಈ ಭಾಷೆಗಳ ಉಳಿವಿಗಾಗಿ ಸೂಕ್ತ ಸಾಮಗ್ರಿ ಒದಗಿಸಲು ಸಹಾಯ ಮಾಡಬಲ್ಲೆವು. ಆದರೂ ಆಯಾ ಭಾಷಿಗರೇ ತಮ್ಮ ಭಾಷೆಯ ರಕ್ಷಣಗೆ ಕಟಿಬದ್ಧರಾಗಿರಬೇಕಾಗುತ್ತದೆ ಎಂದು ಭಾರತೀಯ ಅವಸಾನದಂಚಿನಲ್ಲಿರುವ ಭಾಷೆಗಳ ಯುನೆಸ್ಕೋ ಸಂಶೋಧಕ ಜೀನ್ ರಾಬರ್ಟ್ ಆಪ್ಗೆನಾರ್ಟ್ ಅವರು ಹೇಳಿದ್ದಾರೆ.

ಗುರುವಾರ ಮುಕ್ತಾಯವಾದ ಎರಡು ದಿನಗಳ ಅವಸಾನದಂಚಿನಲ್ಲಿರುವ ಭಾಷೆಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ರಾಬರ್ಟ್ ಮತ್ತು ಇತರ ಶಿಕ್ಷಣ ತಜ್ಞರು ಈ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು.

ಅಪಾಯದಲ್ಲಿರುವ ವಿಶ್ವ ಭಾಷೆಗಳ ಯುನೆಸ್ಕೋ ಸಂಪುಟ -2009ದ ವರದಿ ಆಧರಿಸಿ ಇನ್‌ಟ್ಯಾಕ್ ಎಂಬ ಪರಂಪರೆ ರಕ್ಷಣಾ ಸಂಸ್ಥೆ ಸಂಘಟಿಸಿದ್ದ ವಿಚಾರ ಸಂಕಿರಣದಲ್ಲಿ, 196 ಭಾರತೀಯ ಭಾಷೆಗಳು ಅವಸಾನದಂಚಿನಲ್ಲಿರುವ ಬಗ್ಗೆ ಕಳವಳ ವ್ಯಕ್ತವಾಯಿತು.

ಹಿಮಾಲಯ ಪ್ರದೇಶದಲ್ಲಿ ಬರವಣಿಗೆ ಸಾಹಿತ್ಯವಿಲ್ಲದ ಮತ್ತು ದಾಖಲೆಗಳಿಲ್ಲದ ಸೈನೋ-ಟಿಬೆಟನ್ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಕಡಿಮೆಯಿದೆ. ಇಂಥ ಪ್ರದೇಶಗಳಲ್ಲಿ ಪೋಷಕರೇ ಭಾಷೆಯ ರಕ್ಷಕರು ಎಂದು ತಜ್ಞರು ಅಭಿಪ್ರಾಯಪಟ್ಟರು.

ಆರಂಭಿಕ ಹಂತದಲ್ಲಿಯೇ ಮಕ್ಕಳಿಗೆ ಮಾತೃಭಾಷೆ ಕಲಿಸುವುದನ್ನು ಪ್ರೋತ್ಸಾಹಿಸಲು ಪೋಷಕರು ಮತ್ತು ಶಿಕ್ಷಣ ತಜ್ಞರು ಶ್ರಮಿಸಬೇಕಾಗಿದೆ ಎಂದು ಇನ್‌ಟ್ಯಾಕ್ ಅಧ್ಯಕ್ಷ ಎಸ್.ಕೆ.ಮಿಶ್ರಾ ಹೇಳಿದರು. ಜಾಗತಿಕವಾಗಿ ಇಂಗ್ಲಿಷ್ ಮತ್ತು ಭಾರತದಲ್ಲಿ ಹಿಂದಿ ಭಾಷೆಯು ಹಲವಾರು ಭಾಷೆಗಳನ್ನು ಕೊಲ್ಲುತ್ತಿವೆ. ಛತ್ತೀಸ್‌ಗಡೀ ಮತ್ತು ಬಘೇಲಿ ಮುಂತಾದ ಪ್ರಾದೇಶಿಕ ಬುಡಕಟ್ಟು ಭಾಷೆಗಳನ್ನು ಹೊಸ ಪೀಳಿಗೆಯವರು ಬಳಸುತ್ತಲೇ ಇಲ್ಲ ಎಂದು ಅವರು ಹೇಳಿದರು.

ಅವಸಾನದಂಚಿನಲ್ಲಿದೆ ಎಂದು ಯುನೆಸ್ಕೋ ಪಟ್ಟಿ ಮಾಡಿದ ಭಾರತೀಯ ಭಾಷೆಗಳಲ್ಲಿ ಶೇ.80ರಷ್ಟು ಬುಡಕಟ್ಟು ಭಾಷೆಗಳು ಸೇರಿವೆ. ಈ ಬಗ್ಗೆ ಅರುಣಾಚಲ ಬುಡಕಟ್ಟು ಅಧ್ಯಯನ ಸಂಸ್ಥೆಯ ಲೀಸಾ ಲೋಮದಕ್ ಅವರು ಮಾಹಿತಿ ನೀಡಿದರು. ಹಿಂದಿ ಬಳಕೆಯ ಲಾಭಗಳು ಹಲವು. ಆದರೆ ಇದು ಈಗ ಭಾಷಾ ನಷ್ಟದ ಗಂಭೀರ ಹಂತಕ್ಕೆ ತಲುಪಿದೆ. ಅದು ಬುಡಕಟ್ಟು ಜನರ ಮಾತೃಭಾಷೆಯನ್ನು ನುಂಗಿಹಾಕುತ್ತಿದೆ. ಇದೀಗ ಅರುಣಾಚಲ ಪ್ರದೇಶದಲ್ಲಿ ತಮ್ಮ ಮಾತೃಭಾಷೆ ಮರೆತಿರುವ ಜನತೆ ಅರುಣಾಚಲೀ ಹಿಂದಿಯನ್ನೇ ಬಳಸತೊಡಗಿದ್ದಾರೆ ಎಂದರು ಲೀಸಾ.

ಜವಾಹರಲಾಲ್ ನೆಹರು ವಿವಿಯ ಭಾಷಾ ಕೇಂದ್ರದ ಅನ್ವಿತಾ ಅಬ್ಬಿ ಮಾತನಾಡಿ, ಭಾರತವು ಹಿಂದೆ ಪರಿಣಾಮಕಾರಿ ಚತುರ್ಭಾಷಾ ನೀತಿಯನ್ನು ಅನುಸರಿಸಿತ್ತು. ಮಕ್ಕಳಿಗೆ ಮಾತೃಭಾಷೆ, ಪ್ರಾದೇಶಿಕ ಭಾಷೆ, ಹಿಂದಿಯಂತಹ ಸಂವಹನ-ಕೊಂಡಿಯಂತಿರುವ ಭಾಷೆ ಮತ್ತು ಇಂಗ್ಲಿಷ್ ಕಲಿಸಲಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ ಎಂದ ಅಬ್ಬಿ, ಹಿಂದಿ ಅಥವಾ ಇಂಗ್ಲಿಷ್ ಆರಿಸುವ ಅವರ ನೀತಿಯನ್ನು ನಿರ್ಲಕ್ಷಿಸುವ ಬದಲು, ಶಾಲಾ ಹಂತದಲ್ಲಿ ಮಾತೃಭಾಷೆಯ ಬಳಕೆಗೂ ಅವಕಾಶ ಮಾಡಿಕೊಡಬೇಕಾಗಿದೆ ಎಂದರು.

ಹೀಗೇ ಮುಂದುವರಿದರೆ ಮತ್ತು ಸರಕಾರವು ಕೂಡ ಈ ಕ್ಷೇತ್ರದತ್ತ ನಿರ್ಲಕ್ಷ್ಯ ತೋರಿದರೆ ಭಾಷೆಯೊಂದಿಗೆ ಹೊಂದಿಕೊಂಡಿರುವ ಸಂಸ್ಕೃತಿ ಅಥವಾ ಪರಂಪರೆಯೇ ನಾಶವಾದೀತು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕೇಂದ್ರೀಯ ಭಾರತೀಯ ಭಾಷೆಗಳ ಮತ್ತು ಬುಡಕಟ್ಟು ಭಾಷೆಗಳ ಸಂಸ್ಥೆಯ ಸಂಶೋಧನಾಧಿಕಾರಿ ಜಿ.ಡಿ.ಪ್ರಸಾದ್ ಶಾಸ್ತ್ರಿ ಆತಂಕ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ