ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ದಾಳಿ ನಂತರ ಪಾಕ್ ಪರ ನಿಂತಿದ್ದ ಅಮೆರಿಕಾ? (USA | ISI | Pakistan | Mumbai attacks)
Bookmark and Share Feedback Print
 
ಮುಂಬೈ ದಾಳಿಯ ಸಂದರ್ಭದಲ್ಲಿ ಭಾರತದ ಮಿತ್ರರಾಷ್ಟ್ರವೆಂಬಂತೆ ಅಮೆರಿಕಾ ಕಾಣಿಸಿಕೊಂಡದ್ದು ಬರೀ ನಟನೆ ಎಂಬುದು ಬಹಿರಂಗವಾಗಿದೆ. ವಿಕಿಲೀಕ್ಸ್ ಬಯಲುಗೊಳಿಸುವ ನೂತನ ದಾಖಲೆಗಳ ಪ್ರಕಾರ, ಮುಂಬೈ ದಾಳಿ ನಡೆದ ನಂತರ ಪಾಕಿಸ್ತಾನದ ರಕ್ಷಣೆಗೆ ಗುರಾಣಿ ಹಿಡಿದು ನಿಂತಿದ್ದ ಅಮೆರಿಕಾ, ಐಎಸ್ಐ ಮುಖ್ಯಸ್ಥನನ್ನು ಬಚಾವ್ ಮಾಡಲು ಇನ್ನಿಲ್ಲದ ಯತ್ನ ನಡೆಸಿತ್ತು.

2008ರ ನವೆಂಬರ್ 26ರಂದು ನಡೆದಿದ್ದ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಸರಕಾರಿ ಸಂಸ್ಥೆಗಳು ಪಾಲ್ಗೊಂಡಿರುವ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸದಂತೆ ಅಮೆರಿಕಾ ಯತ್ನಿಸಿದ್ದು ಮಾತ್ರವಲ್ಲ, ಜತೆಗೆ ಕುಖ್ಯಾತ ಐಎಸ್ಐಯನ್ನು ಕೂಡ ರಕ್ಷಿಸಲು ಹೊರಟಿತ್ತು ಎಂದು ವಿಕಿಲೀಕ್ಸ್ ಹೇಳಿದೆ.

ಮುಂಬೈ ದಾಳಿಗೆ ಸಂಬಂಧದ ತನಿಖಾ ಮಾಹಿತಿಗಳನ್ನು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಭಾರತ ಹಂಚಿಕೊಳ್ಳುವುದನ್ನು ತಡೆಯಬೇಕು ಎಂದು ಪಾಕಿಸ್ತಾನದಲ್ಲಿ ಅಮೆರಿಕಾದ ರಾಯಭಾರಿಯಾಗಿದ್ದ ಅನ್ನೆ ಡಬ್ಲ್ಯೂ. ಪ್ಯಾಟರ್ಸನ್ ತನ್ನ ದೇಶದ ಜತೆ 2009ರ ಜನವರಿ ತಿಂಗಳಲ್ಲಿ ನಡೆಸಿರುವ 'ರಹಸ್ಯ' ಎಂದು ನಮೂದಿಸಲಾಗಿರುವ ಪತ್ರ ವ್ಯವಹಾರದಲ್ಲಿ ಒತ್ತಾಯಿಸಿರುವುದು ವಿಕಿಲೀಕ್ಸ್ ದಾಖಲೆಗಳಿಂದ ಬಹಿರಂಗವಾಗಿದೆ.

ತನಿಖೆ ಪೂರ್ತಿಗೊಳ್ಳುವವರೆಗೆ ದಾಳಿಯ ಕುರಿತ ಮಾಹಿತಿಯನ್ನು ಬಹಿರಂಗಪಡಿಸುವುದು ಸರಿಯಲ್ಲ. ಹಾಗೆ ಮಾಡುವುದರಿಂದ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮತ್ತು ಅದರ ಮುಖ್ಯಸ್ಥ ಶೂಜಾ ಪಾಶಾ ಅವರ ಘನತೆಗೆ ಕುಂದು ಬರಬಹುದು ಎಂದು ಅಮೆರಿಕಾ ರಾಯಭಾರಿ ಅಭಿಪ್ರಾಯಪಟ್ಟಿದ್ದರು.

ಭಾರತವು ಮುಂಬೈ ದಾಳಿ ಕುರಿತು ನಡೆಸಿದ ತನಿಖೆಯ ಫಲಿತಾಂಶಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವ ಮೊದಲೇ ಪಾಶಾ ಮುಜುಗರಕ್ಕೊಳಗಾದರೆ, ಇದು ಪಾಕಿಸ್ತಾನವು ಈ ಕುರಿತು ತನಿಖೆ ನಡೆಸುವ ಸಾಮರ್ಥ್ಯವನ್ನು ಕುಗ್ಗಿಸಬಹುದು, ಪಾಕಿಸ್ತಾನದಲ್ಲಿ ಸಾರ್ವಜನಿಕ ಆಕ್ರೋಶಗಳು ಕಂಡು ಬರಬಹುದು ಮತ್ತು ಪಾಶಾ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದು ಎಂದು ದಾಖಲೆಯಲ್ಲಿ ಹೇಳಲಾಗಿದೆ.

ಹಾಗಾಗಿ ಅಮೆರಿಕಾದ ವಿದೇಶಾಂಗ ಸಚಿವಾಲಯವು ಮುಂಬೈ ದಾಳಿ ಕುರಿತ ಮಾಹಿತಿಯನ್ನು ಭಾರತಕ್ಕೆ ಒದಗಿಸುವಲ್ಲಿ ವಿಳಂಬ ಮಾಡಬೇಕು ಎಂದು ಪಾಕಿಸ್ತಾನದಲ್ಲಿ ಅಮೆರಿಕಾ ರಾಯಭಾರಿ ಒತ್ತಾಯಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ