ಬಳ್ಳಾರಿ ಸಚಿವರ ಜೊತೆ ತಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೇಪೆ ಹಚ್ಚಿದರು ಕೂಡ, ಸಚಿವ ಜನಾರ್ದನ ರೆಡ್ಡಿ ಸಿಎಂ ವಿರುದ್ಧ ತಮಗಿರುವ ಅಸಮಾಧಾನವನ್ನು ಬಹಿರಂಗವಾಗಿ ಮತ್ತೊಮ್ಮೆ ಹೊರಹಾಕಿದ್ದಾರೆ.
ಗದಗ ಜಿಲ್ಲಾಧಿಕಾರಿ ಎಸ್.ವಿ.ಪ್ರಸಾದ್ ಎತ್ತಂಗಡಿ, ಕಬ್ಬಿಣ ಅದಿರು ಲಾರಿಗಳ ಮೇಲೆ ವಿಧಿಸಿರುವ ತೆರಿಗೆ ಹಾಗೂ ನೆರೆ ಸಂತ್ರಸ್ತರಿಗಾಗಿ ರೂಪಿಸಿರುವ ಆಸರೆ ಯೋಜನೆ ಉಸ್ತುವಾರಿಯನ್ನು ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ವಹಿಸಿರುವ ಮುಖ್ಯಮಂತ್ರಿ ಕ್ರಮವನ್ನು ರೆಡ್ಡಿ ತೀವ್ರವಾಗಿ ವಿರೋಧಿಸಿದ್ದಾರೆ.
ಪ್ರಮುಖವಾದ ಈ ಮೂರು ತೀರ್ಮಾನಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡ ಬಗ್ಗೆ ಹಾಗೂ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಕುರಿತು ಕಿಡಿಕಾರಿದ್ದಾರೆ.
ಕಂದಾಯ ಖಾತೆ ಕರುಣಾಕರ ರೆಡ್ಡಿ, ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಆದರೂ ಕೂಡ ಇಬ್ಬರ ಖಾತೆಗಳಲ್ಲಿ ಅನಗತ್ಯವಾಗಿ ಸವಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.