ಅದಿರು ಸಾಗಿಸುವ ಲಾರಿಗಳ ಮೇಲೆ ಸುಂಕ ವಿಧಿಸಲು ನಿರ್ಧರಿಸಿರುವ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಶಿಕಾರಿಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ವ್ಯಕ್ತಿಗಳು ಎಷ್ಟೇ ಪ್ರಭಾವಶಾಲಿಗಳಾಗಿರಲಿ ಯಾವುದೇ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂಬ ಅಂಶವನ್ನು ಒತ್ತಿ ಹೇಳಿದರು.
ಅದಿರು ಸಾಗಣೆ ಮಾಡುವ ಲಾರಿಗಳಿಂದಲೇ ರಾಜ್ಯದ ಕೆಲವೊಂದು ಭಾಗಗಳ ರಸ್ತೆಗಳು ತೀವ್ರವಾಗಿ ಹಾಳಾಗಿವೆ ಎಂಬ ಕುರಿತು ವರದಿಗಳು ಬಂದಿವೆ ಎಂದು ನುಡಿದ ಯಡಿಯೂರಪ್ಪ, ಈ ನಿಟ್ಟಿನಲ್ಲಿ ಅದಿರು ಲಾರಿಗಳ ಮೇಲೆ ಶುಲ್ಕ ವಿಧಿಸುವುದು ಅನಿವಾರ್ಯವಾಗಿದೆ ಎಂದರು.
ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿರುವುದು ಕೇವಲ ಅದಿರು ಲಾರಿಗಳಿಗೆ ಮಾತ್ರವೇ ಅಲ್ಲ, ಇದನ್ನು ಸಂಬಂಧಪಟ್ಟವರು ಗಮನಿಸಬೇಕು ಎಂಬುದನ್ನು ಪುನರುಚ್ಚರಿಸಿದ ಯಡಿಯೂರಪ್ಪ, ರಾಜ್ಯದಲ್ಲಿನ ಅನೇಕ ರಸ್ತೆಗಳು ಸಾಕಷ್ಟು ಹದಗೆಟ್ಟಿವೆ. ಜೊತೆಗೆ, ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತರುವ ಅಗತ್ಯವೂ ಎದುರಾಗಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಸುಂಕ ವಿಧಿಸುವಿಕೆ ಅನಿವಾರ್ಯ ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.