ಒಳ್ಳೆಯ ಕೆಲಸ ಮಾಡುವುದು, ಪ್ರಾಮಾಣಿಕತೆಯಿಂದ ಇರುವುದು ಅಪರಾಧವಾಗಿದೆ. ಹೀಗಾಗಿ ನನಗೆ ತುಂಬಾ ನೋವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿದ್ಯಾರ್ಥಿನಿಯರ ಮುಂದೆ ಕಣ್ಣೀರು ಸುರಿಸಿದ ಪ್ರಸಂಗ ಮಂಗಳವಾರ ನಡೆಯಿತು.
ಸರ್ಕಾರ ಇರುತ್ತೆ ಹೋಗುತ್ತೆ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದರೆ, ತಾಯಿಯೇ ತನ್ನ ಮಗುವಿಗೆ ವಿಷ ನೀಡಿದರೆ, ರಕ್ಷಣೆ ನೀಡುವವರು ಯಾರು ಎಂದು ಗದ್ಗದಿತರಾಗಿ ಮಾತನಾಡಿದ ಮುಖ್ಯಮಂತ್ರಿಗಳು ದೇಶದ್ರೋಹಿಗಳು, ಉಗ್ರಗಾಮಿಗಳು ಅಕ್ಕ-ಪಕ್ಕದಲ್ಲಿಯೇ ಇದ್ದಾರೆ, ಎಚ್ಚರಿಕೆಯಿಂದ ಇರಬೇಕು ಎಂದರು.
ಕರ್ನಾಟಕ ಪರಿಷತ್ ಪ್ರಾಧಿಕಾರ ಕಾಲೇಜು ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಸಹಯೋಗದೊಂದಿಗೆ ಶ್ರೀಮತಿ ವಿ.ಎಚ್.ಡಿ.ಕೇಂದ್ರ ಗೃಹ ವಿಜ್ಞಾನ ಕಾಲೇಜಿನ ಕಟ್ಟಡ ಉದ್ಘಾಟನೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ನೆರೆ ಹಾವಳಿ ಹಾಗೂ ಇತರೆ ಕಾರ್ಯಕ್ರಮಗಳಿಗಾಗಿ ಬೆಳಿಗ್ಗೆ 4.30ರಿಂದ ಸಚಿವರೊಂದಿಗೆ ಸಭೆ ನಡೆಸುತ್ತಿದ್ದೆ. ಹೀಗಾಗಿ ಸಮಾರಂಭಕ್ಕೆ 3ಗಂಟೆಗಳ ಕಾಲ ತಡವಾಗಿ ಬಂದಿದ್ದೇನೆ. ತಡವಾಗಿ ಬಂದಿದ್ದಕ್ಕೆ ಅನ್ಯತಾ ಭಾವಿಸಬೇಡಿ. ನೆರೆಯಿಂದ ಸಂತ್ರಸ್ತರಾದವರಿಗೆ ನೆರವಾಗಲು ದಾನಿಗಳು ಮುಂದೆ ಬಂದಿದ್ದಾರೆ. ಈ ಹಣ ಪ್ರಾಮಾಣಿಕವಾಗಿ ಸದುಪಯೋಗವಾಗುವ ಆಶಯ ಇರುವುದಾಗಿ ಹೇಳಿದರು.
ನಾಡಿನ ಜನ ಸಂಕಷ್ಟದಲ್ಲಿದ್ದಾರೆ, ನೂರು ವರ್ಷಗಳಲ್ಲಿ ಕಂಡರಿಯದ ನೆರೆ ಹಾವಳಿ ಸಂಭವಿಸಿ,ಲಕ್ಷಾಂತರ ಜನ ತಿನ್ನಲು ಅನ್ನವಿಲ್ಲದೆ, ಸೂರಿಲ್ಲದೆ ಧಾರುಣ ಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಆತಂಕ ಎದುರಾಗಿರುವುದು ದುಃಖಕ್ಕೆ ಕಾರಣ ಎಂದರು.