ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಜತೆ ಜೆಡಿಎಸ್ ಮತ್ತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಆಡಳಿತಾರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗಣಿಧಣಿಗಳ ನಡುವೆ ಉದ್ಭವವಾಗಿರುವ ಬಿಕ್ಕಟ್ಟಿನ ಕುರಿತು ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ಅಂತಹ ತಪ್ಪು ಮಾಡಲ್ಲ ಎಂದು ಹೇಳಿದರು.
ಅಲ್ಲದೆ,ಬಿಜೆಪಿಯಲ್ಲಿ ತಲೆದೋರಿರುವ ಭಿನ್ನಮತದ ಲಾಭ ಪಡೆಯಲು ಕೂಡ ಜೆಡಿಎಸ್ ಯತ್ನಿಸಿಲ್ಲ ಎಂದ ಕುಮಾರಸ್ವಾಮಿ, ನಮಗೆ ಮತ್ತೆ ಬಿಜೆಪಿಯ ಸಹವಾಸ ಬೇಕಾಗಿಲ್ಲ ಎಂದರು.
ಸರ್ಕಾರ ಸಮಸ್ಯೆಯನ್ನು ಬಗೆಹರಿಸುವ ಪರಿಜ್ಞಾನ ಕಲಿಯಲಿ ಎಂಬುದಾಗಿಯೂ ಅವರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಸಲಹೆಯನ್ನು ನೀಡಿದ್ದಾರೆ.
ವರ್ಗಾವಣೆ ವಿರುದ್ಧ ಅಸಮಾಧಾನ: ರೆಡ್ಡಿ ಸಹೋದರರಿಗೆ ತಿರುಗೇಟು ಎಂಬಂತೆ ಮುಖ್ಯಮಂತ್ರಿಗಳು ಬಳ್ಳಾರಿ, ಗದಗ ಜಿಲ್ಲೆಯ ಅಧಿಕಾರಿಗಳನ್ನು ಏಕಾಏಕಿ ಎತ್ತಂಗಡಿ ಮಾಡಿರುವ ಕ್ರಮದ ಬಗ್ಗೆ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಅಧಿಕಾರಿಗಳನ್ನು ವರ್ಗಾಯಿಸುವ ಮೂಲಕ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತಿದೆ ಎಂದು ಆರೋಪಿಸಿದ್ದಾರೆ.