ತುಳುನಾಡ ಬೆಡಗಿ ಐಶ್ವರ್ಯಾ ರೈಯನ್ನು ಇನ್ನೇನು ಮದುವೆಯಾಗಿಯೇ ಬಿಟ್ಟರು ಎಂಬಲ್ಲಿವರೆಗೆ ಸುದ್ದಿಗೆ ಗ್ರಾಸವಾಗಿದ್ದ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮತ್ತೆ ಭಗ್ನ ಪ್ರೇಮಿಯಾಗಿ ದೇವದಾಸನಾಗಿದ್ದು ಗೊತ್ತೇ ಇದೆ. ಇಂಥ ವಿವೇಕ್ ಒಬೆರಾಯ್ ಹೆಸರು ಆಮೇಲೆ ನೀರು ಭಾಜ್ವಾ, ವಿದ್ಯಾ ಬಾಲನ್, ಗುರ್‌ಪ್ರೀತ್ ಗಿಲ್ ಮತ್ತಿತರರ ಜೊತೆಗೆ ಗಾಸಿಪ್ ಕಾಲಂಗಳಲ್ಲಿ ಕಂಡು ಬಂದಿತ್ತು. ಇಂತಿಪ್ಪ ವಿವೇಕ್ ಒಬೆರಾಯ್ ಕೊನೆಗೂ ವಿವಾಹ ಬಂಧನಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದಾನೆ. ಆ ಮೂಲಕ ಕೊನೆಗೂ ಆತ ಕರ್ನಾಟಕದ ಅಳಿಯನಾಗಲಿದ್ದಾನೆ!
ಹೌದು. ವಿವೇಕ್ ಒಬೆರಾಯ್ ಮದುವೆ ಕರ್ನಾಟಕದ ಮಾಜಿ ಸಚಿವ, ಜೆಡಿಯು ಧುರೀಣ ದಿ|ಜೀವರಾಜ ಆಳ್ವ ಹಾಗೂ ಖ್ಯಾತ ನೃತ್ಯ ಕಲಾವಿದೆ ನಂದಿನಿ ಆಳ್ವರ ಮಗಳು ಪ್ರಿಯಾಂಕಾ ಆಳ್ವಾ ಜೊತೆಗೆ ನಿಶ್ಚಯವಾಗಿದೆ.
ಸದ್ಯ ಪ್ರಿಯಾಂಕಾ ಆಳ್ವ ಲಂಡನ್‌ನಲ್ಲಿದ್ದು, ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ. ಈ ಮದುವೆ ಪಕ್ಕಾ ಹಿರಿಯರು ನಿಶ್ಚಯಿಸಿದ ಮದುವೆಯಾಗಿದ್ದು, ನಂದಿನಿ ಆಳ್ವಾ ಜೊತೆಗೆ ವಿವೇಕ್ ಅವರ ತಂದೆ ಸುರೇಶ್ ಒಬೆರಾಯ್ ಹಾಗೂ ತಾಯಿ ಯಶೋಧರಾ ಕುಳಿತು ಮಾತನಾಡಿ ಒಪ್ಪಿಗೆಯಿಂದ ನಡೆಯುತ್ತಿದೆ. ಮೂಲಗಳ ಪ್ರಕಾರ, ವಿವಾಹ ಸಂಪ್ರದಾಯಬದ್ಧವಾಗಿ ಅಕ್ಟೋಬರ್ 29ರಂದು ನಡೆಯಲಿದೆ.
ಐಶ್ವರ್ಯಾ ರೈ ಕೈಹಿಡಿಯುವ ಅದೃಷ್ಟವಿಲ್ಲದಿದ್ದರೂ, ಕೊನೆಗೂ ಕರ್ನಾಟಕದ ಹುಡುಗಿಯನ್ನೇ ಮದುವೆಯಾಗುತ್ತಿರುವುದು ಮಾತ್ರ ಕಾಕತಾಳೀಯವಾದರೂ, ವಿಶೇಷವಂತೂ ಹೌದು.