ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ಪ್ರತಿಯೊಬ್ಬ ಅಪ್ಪ-ಅಮ್ಮಂದಿರೂ ನೋಡಲೇಬೇಕಾದ ಸಿನಿಮಾ 'ಪಾ'! (Movie Review | Paa | Amitabh Bachchan | R. Balki | Progeria | Vidya Balan | Abhishek Bachchan)
ಸಿನಿಮಾ ವಿಮರ್ಶೆ
Bookmark and Share Feedback Print
 
Paa
IFM
ಎಂದಾದರೂ ಅಮಿತಾಬ್ ಬಚ್ಚನ್ ಅವರ ನಟನೆಯ ಸಿನಿಮಾದಲ್ಲಿ ಅಮಿತಾಬ್ ಅವರೇ ಇಲ್ಲದಂಥ, ಕಾಣದಂಥ ಸಿನಿಮಾ ನೋಡಿದ್ದೀರಾ? ಇದೊಳ್ಳೆ ಪ್ರಶ್ನೆಯಾಯಿತಲ್ಲಾ, ಅಮಿತಾಬ್ ಚಿತ್ರದಲ್ಲಿ ಅಮಿತಾಬ್ ಇಲ್ಲದಿರೋದೇ.. ಹಹ್ಹಹ್ಹಾ.. ಎಂದು ನಕ್ಕುಬಿಡಬೇಡಿ. ಈಗ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ 'ಪಾ'. ಹೌದು. ಪಾ ಚಿತ್ರದಲ್ಲಿ ಅಮಿತಾಬ್ ಇದ್ದಾರೆ! ಆದರೂ ಅಮಿತಾಬ್ ಇಲ್ಲ!!!

ಆರ್.ಬಾಲ್ಕಿ (ಬಾಲಕೃಷ್ಣ) ಎಂಬ ನಿರ್ದೇಶಕರೊಬ್ಬರು ಇಂಥ ಡಿಫರೆಂಟ್ ಪ್ರಯತ್ನ ಮಾಡಿದದ್ದಾರೆ. ಅಮಿತಾಬ್ ಬಚ್ಚನ್ ಅವರನ್ನು ಆರೋ ಆಗಿ ಬದಲಾಯಿಸುವ ಮೂಲಕ ಅಮಿತಾಬ್ ನಟನೆಯ ಚಿತ್ರದಲ್ಲಿ ಅಮಿತಾಬ್ ಅವರನ್ನೇ ಇಲ್ಲವಾಗಿಸಿದ್ದಾರೆ!

ಪಾ ಇಂಥದ್ದೊಂದು ಅದ್ಭುತ ಪವಾಡ ಹೊತ್ತಿರುವ ಚಿತ್ರ. 69ರ ಮುದುಕ 13ರ ಹುಡುಗನಾಗಿ ಕಾಣಿಸೋದೆಂದರೆ ಸುಲಭದ ಮಾತಾ? ಖಂಡಿತಾ ಅಲ್ಲ. ಆದರೆ ಇದನ್ನು ಬಾಲ್ಕಿ ಸಾಧಿಸಿ ತೋರಿಸಿದ್ದಾರೆ. ಬಾಲ್ಕಿ ಕನಸನ್ನು ಅಮಿತಾಬ್ ಬಚ್ಚನ್ ಅವರಂಥ ಬಿಗ್ ನಟ ತೆರೆಯ ಮೇಲೆ ಅದ್ಭುತವಾಗಿ ಕಾರ್ಯರೂಪಕ್ಕಿಳಿಸಿದ್ದಾರೆ. ಅದಕ್ಕೇ ಪಾ ಚಿತ್ರ ಅತ್ಯಪೂರ್ವವಾಗಿ, ಅದ್ಭುತವಾಗಿ ಮನಸ್ಸಿನಾಳಕ್ಕೆ ಇಳಿಯುತ್ತದೆ. ಎಲ್ಲರ ಗಮನವನ್ನೂ ಸೆಳೆಯುತ್ತದೆ.

Paa
IFM
ಚಿತ್ರ ನೋಡಲು ಥಿಯೇಟರಿನಲ್ಲಿ ಕೂತ ಹತ್ತೇ ನಿಮಿಷದಲ್ಲಿ ನಿಮಗೆ ಈ ಚಿತ್ರದಲ್ಲಿ ಅಮಿತಾಬ್ ಇದ್ದಾರೆ ಎನ್ನೋದೇ ಮರೆತುಹೋಗುತ್ತದೆ. ಅಷ್ಟೇ ಅಲ್ಲ, ಆರೋ ಎಂಬ 13ರ ಬಾಲಕ ನಿಮ್ಮನ್ನು ಸಂಪೂರ್ಣವಾಗಿ ಆವರಿಸಿಬಿಡುತ್ತಾನೆ.

ಹಾಗೆ ನೋಡಿದರೆ ಪಾ ಅತ್ಯಂತ ಸಿಂಪಲ್ ಸಿನೆಮಾ. ಅಷ್ಟೇ ಸಿಂಪಲ್ ಆಗಿ ಚಿತ್ರವನ್ನು ತೆಗೆದಿದ್ದಾರೆ ಕೂಡಾ. ಅದಕ್ಕಾಗಿಯೇ ಈ ಚಿತ್ರ ಇಷ್ಟವಾಗುತ್ತದೆ. ಇಂಥದ್ದೊಂದು ದೊಡ್ಡ ಪ್ರಚಾರ, ಬಿಗ್ ಬಿಯಂತಹ ದೊಡ್ಡ ಸ್ಟಾರ್ ನಟನ ಭರಾಟೆಯಲ್ಲಿ ಚಿತ್ರದ ಇತರ ಪಾತ್ರಗಳು ಮಂಕಾಗಿ ಬಿಟ್ಟರೆ ಅನ್ನುವ ಭಯವೂ ಈ ಚಿತ್ರ ಹಿಂದಿತ್ತು. ಅಲ್ಲದೆ, ಇಂಥ ಚಿತ್ರಕಥೆಯೊಂದರ ಹಿಂದಿನ ಉದ್ದೇಶವೂ ಸಂಭಾಷಣೆಯ ಓತಪ್ರೋತದಲ್ಲಿ ಹಾಳಾಗಿಬಿಡುವ ಸಾಧ್ಯತೆಗಳೂ ಇದ್ದವು. ಆದರೆ, ಪಾ ಹಾಗಾಗಿಲ್ಲ. ಚಿತ್ರ ತನ್ನ ಭಾವುಕಥೆಯಲ್ಲಿ, ಚಿತ್ರಕಥೆಯ ಹಿಡಿತದಲ್ಲಿ ಸಂಭಾಷಣೆಯ ಚುರುಕುತನದಲ್ಲಿ ಎಲ್ಲಿಯೂ ಸೋತಿಲ್ಲ. ಹಾಗಾಗಿ ಇದು ಪ್ರತಿ ಅಪ್ಪ, ಅಮ್ಮಂದಿರೂ ನೋಡಬೇಕಾಗುವ ಚಿತ್ರವಾಗಿ ಹೊರಹೊಮ್ಮಿದೆ.

ಆರೋ(ಅಮಿತಾಬ್ ಬಚ್ಚನ್) ತುಂಬ ಬುದ್ಧಿವಂತ. ತಮಾಷೆಯ ಸ್ವಭಾವದ 13ರ ಹುಡುಗನಾದ ಈತ ಒಂದು ಅಪರೂಪದ ಖಾಯಿಲೆಯಿಂದ ಬಳಲುತ್ತಿರುತ್ತಾನೆ. ಮಾನಸಿಕವಾಗಿ 13ರ ಹುಡುಗನಂತೆ ವರ್ತಿಸಿದರೂ, ದೈಹಿಕವಾಗಿ ನಿಜ ವಯಸ್ಸಿನ ಐದು ಪಟ್ಟು ಬೆಳೆಯುವ ರೋಗವಿದು. ರೋಗದ ಹೆಸರು ಪ್ರೊಜೇರಿಯಾ! ಇಂಥ ಪರಿಸ್ಥಿತಿಯಿದ್ದರೂ ಆರೋ ತುಂಬ ಸಂತೋಷದಿಂದ ಕಾಲ ಕಳೆಯುವ ಹುಡುಗ. ಗೈನಕಾಲಜಿಸ್ಟ್ ಆಗಿರುವ ತಾಯಿ ವಿದ್ಯಾ( ವಿದ್ಯಾ ಬಾಲನ್) ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿರುವ ತಂದೆ ಅಮೋಲ್ (ಅಭಿಷೇಕ್ ಬಚ್ಚನ್) ಜೊತೆಗೆ ವಾಸಿಸುತ್ತಿರುತ್ತಾನೆ.
Paa
IFM


ಚಿತ್ರದಲ್ಲಿ ಮೊದಲು ಕಥೆ ಆರೋನ ಮೇಲೆ ಕೇಂದ್ರೀಕೃತವಾಗಿ ನಿಮ್ಮನ್ನು ತನ್ನತ್ತ ಸೆಳೆದುಕೊಳ್ಳುತ್ತದೆ. ಆದರೆ, ನಂತರ ಚಿತ್ರ ಅಪ್ಪನಾದ ರಾಜಕಾರಣಿ ಅಮೋಲ್ ಸುತ್ತ ಸುತ್ತುತ್ತದೆ. ಆಗ ಚಿತ್ರ ಸ್ವಲ್ಪ ಹಳಿ ತಪ್ಪಿದಂತನಿಸಿದರೂ, ಅಲ್ಲೂ ಇಂಟರೆಸ್ಟಿಂಗ್ ಕಥಾನಕವೇ ಇರೋದರಿಂದ ಚಿತ್ರ ಗಮನವನ್ನು ತನ್ನೆಡೆಯಿಂದ ಬೇರೆಡೆಗೆ ಹರಿಸಲು ಬಿಡುವುದಿಲ್ಲ. ಮಧ್ಯಂತರದ ನಂತರ ಚಿತ್ರ ಗಮನಾರ್ಹವಾಗಿ ಸೆಳೆಯುತ್ತದೆ. ಅಪ್ಪ ಮಗನ ಮಾನಸಿಕ ಬಂಧನ ಚಿತ್ರದಲ್ಲಿ ಮೇಳೈಸುತ್ತದೆ. ಇಲ್ಲಿರುವ ಭಾವುಕತೆ ಅದ್ಭುತ. ಹಾಗಾಗಿ ಸಾಕಷ್ಟು ಕರ್ಚೀಪುಗಳನ್ನು ತೆಗೆದುಕೊಂಡು ಸಿದ್ಧರಾಗಿಯೇ ಥಿಯೇಟರಿಗೆ ನುಗ್ಗೋದು ಒಳ್ಳೆಯದು.

ಪಾ ಒಂದು ಪಾಸಿಟಿವ್ ಧೋರಣೆ ಹೊಂದಿರುವ ಚಿತ್ರ. ಚಿತ್ರದಲ್ಲಿ ಆರೋ ಹಾಗೂ ಆತನ ಗೆಳೆಯ ನಡುವಿನ ಸಂಭಾಷಣೆಗಳು ಮನಮುಟ್ಟುವಂತೆ ಮೂಡಿಬಂದಿದೆ. ಆ ಮೂಲಕ ಆರೋ ಡಿಫರೆಂಟ್ ಅನ್ನೋದನ್ನು ಚಿತ್ರ ತೋರಿಸಿಕೊಡುತ್ತದೆ.

ಒಟ್ಟಾರೆ ಇಂಥ ಡಿಫರೆಂಟ್ ಅದ್ಭುತ ಚಿತ್ರ ನೀಡಲು ಪ್ರಯತ್ನ ಪಟ್ಟ ನಿರ್ದೇಶಕ ಬಾಲ್ಕಿಗೆ ಒಂದು ಸೆಲ್ಯೂಟ್ ಹೊಡೆಯಲೇಬೇಕು. ತನ್ನ ಜೀವಮಾನದಲ್ಲೇ ಕಾಣಿಸಿದ ಹೊಸ ಲುಕ್ ಅನ್ನು ಅಮಿತಾಬ್‌ಗೆ ನೀಡಿದ ಶ್ರೇಯಸ್ಸೂ ಇವರದೇ. ಬಾವುಕತೆ ಸಂದರ್ಭಗಳಲ್ಲೂ ಉತ್ತಮ ಹಿಡಿತ ಸಾಧಿಸಿದ್ದಾರೆ ಬಾಲ್ಕಿ. ಚಿತ್ರದಲ್ಲಿ ಇಳಯರಾಜ ಅವರಿಂದ ಉತ್ತಮ ಸಂಗೀತ ಮಾಧುರ್ಯ ಭರಿತ ಸಂಗೀತವೂ ಇದೆ. ಪಿ.ಸಿ.ಶ್ರೀರಾಮ್ ಅವರ ಸಿನೆಮ್ಯಾಟೋಗ್ರಫಿ ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟು.ಇಷ್ಟು ಹೇಳಿ ಚಿತ್ರದ ಮೇಕಪ್ ಕಲಾವಿದರಿಗೆ ಚಿತ್ರದ ಶ್ರೇಯಸ್ಸು ನೀಡದಿದ್ದರೆ ಅದೊಂದು ದೊಡ್ಡ ಮೂರ್ಖತನ. 13ರ ಹುಡುಗನನ್ನಾಗಿ 69ರ ಮುದುಕನನ್ನು ತುಂಬ ಸಹಜವಾಗಿ ಕಾಣುವಂತೆ ಬದಲಾಯಿಸಿದ ಮೇಕಪ್ ಕಲಾವಿದರಾದ ಕ್ರಿಸ್ಟಿನ್ ಟಿನ್‌ಸ್ಲೇ ಹಾಗೂ ಡೊಮಿನಿ ಟಿಲ್ ಅವರಿಗೆ ಸಾಷ್ಟಾಂಗ ಪ್ರಣಾಸ ಸಲ್ಲಬೇಕು!

Paa
IFM
ನಟನೆಯ ಮಟ್ಟಿನಲ್ಲಿ ಹೇಳುವುದಾದರೆ, ಅಮಿತಾಬ್ ಬಚ್ಚನ್ ಅವರ ನಟನೆಗೆ ಹೋಲಿಕೆಗಳೇ ಇಲ್ಲ. ಅಮಿತಾಬ್ ಎಂದರೆ ಅಮಿತಾಬ್ ಮಾತ್ರವೇ ಎಂಬುದನ್ನು ಈ ಚಿತ್ರ ದೃಢಪಡಿಸುತ್ತದೆ. ನಾಲ್ಕು ದಶಕಗಳಿಂದ ಅಮಿತಾಬ್ ನಟನೆಯಲ್ಲಿ ಅಗ್ರಮಾನ್ಯ ಸ್ಥಾನದಲ್ಲಿ ನಿಲ್ಲುವುದು ಪಾ ಚಿತ್ರದ ನಟನೆ ಎಂದರೂ ತಪ್ಪಾಗಲಾರದು. ಅಮಿತಾಬ್ ಅವರಂಥ ದೊಡ್ಡ ನಟನೊಂದಿಗೆ ಬೇರೆ ನಟರು ಮರೆಯಾಗಿ ಬಿಡುವ ಎಲ್ಲ ಸಾಧ್ಯತೆಗಳಿದ್ದರೂ, ಅದನ್ನು ಹಾಗಾಗದಂತೆ ಮಾಡುವಲ್ಲಿ ಅಭಿಷೇಕ್ ಬಚ್ಚನ್ ಹಾಗೂ ವಿದ್ಯಾಬಾಲನ್ ಅವರ ಶ್ರಮವೂ ಇದೆ. ಅಭಿಷೇಕ್ ತನ್ನ ಅಪ್ಪನಿಗೆ ಪೈಪೋಟಿ ಕೊಡುವಂತೆ ಅದ್ಭುತವಾಗಿ ನಟಿಸಿದ್ದಾರೆ. ವಿದ್ಯಾ ಬಾಲನ್ ಮತ್ತೊಮ್ಮೆ ತಾನೆಂಥಾ ನಟಿ ಎಂಬುದನ್ನು ಈ ಚಿತ್ರದಲ್ಲಿ ಸಾಧಿಸಿ ತೋರಿಸಿದ್ದಾರೆ. ಇನ್ನುಳಿದಂತೆ ಪರೇಶ್ ರವಾಲ್ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಾರೆ. ಅರುಂಧತಿ ನಾಗ್ ಕೂಡಾ ಅದ್ಭುತ. ಪಾಟ್ರಿಕ್, ಜಯಾ ಬಚ್ಚನ್ ಕೂಡಾ ತಮ್ಮ ಪಾತ್ರಕ್ಕೆ ಉತ್ತಮ ನ್ಯಾಯವನ್ನೇ ಒದಗಿಸಿದ್ದಾರೆ.

ಚಿತ್ರದ ಓಟದ ದೃಷ್ಟಿಯಿಂದ ನೋಡಿದರೂ ಪಾ ಚಿತ್ರ ಇತರ ಚಿತ್ರಗಳಿಗೆ ಹೋಲಿಸಿ ನೋಡಿದರೆ ಅಂಥದ್ದೊಂದು ದೊಡ್ಡ ಮೊತ್ತದ ಬಜೆಟ್‌ನಿಂದ ತಯಾರಾಗಿಲ್ಲ. ಪಾಗೆ ಬಳಸಲಾದ ಖರ್ಚು ಒಟ್ಟು 17 ಕೋಟಿ ರೂಪಾಯಿಗಳು. ಇದು ಕೇವಲ ಮಲ್ಟಿಪ್ಲೆಕ್ಸ್‌ಗಳಿಂದಲೇ ಗಳಿಕೆಯಾಗಬಹುದೆಂಬ ಲೆಕ್ಕಾಚಾರ ಹಾಕಲಾಗಿದೆ. ಒಟ್ಟಾರೆ ಪಾ ನೋಡುವುದು ಪ್ರತಿಯೊಬ್ಬನ ಜೀವನದಲ್ಲೊಂದು ಮರೆಯಲಾಗದ ಘಟನೆ. ಫ್ರೆಶ್ ಕಥೆಗಳನ್ನು ನಿರೂಪಿಸುವುದರಲ್ಲಿ ಹಿಂದಿ ಚಿತ್ರರಂಗ ಹಿಂದೆ ಬಿದ್ದಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಹಾಗಾಗಿ ಖಂಡಿತ ಪಾ ನೋಡಿ. ಪ್ರತಿ ಅಪ್ಪ, ಅಮ್ಮನೂ ನೋಡಲೇಬೇಕಾದ ಚಿತ್ರ ಪಾ. ಅಂಥದ್ದೊಂದು ಅನುಭವ್ಕಕೆ ಸಿದ್ಧರಾಗಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಾ, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್, ಆರ್ ಬಾಲಕೃಷ್ಣ