ರಾಮ್ ಗೋಪಾಲ್ ವರ್ಮಾ ಬ್ಯಾನರಿನ, ನಮ್ಮ ಕನ್ನಡದ ಸುದೀಪ್ ಅಭಿನಯದ ಮೂರನೇ ಚಿತ್ರ ಫೂಂಕ್ 2 ಬಿಡುಗಡೆಯಾಗಿದೆ. ಇದು ಸುದೀಪ್ ಅಭಿನಯದ ಎರಡನೇ ಹಾರರ್ ಚಿತ್ರವಾಗಿದ್ದು, ಅಂಥಾ ವಿಶೇಷತೆಯನ್ನೇನೂ ಹೊಂದಿರುವುದು ಕಾಣುತ್ತಿಲ್ಲ. ಸುದೀಪ್ ಅಭಿನಯದ ಬಗ್ಗೆ ಎರಡು ಮಾತೇ ಇಲ್ಲದಿದ್ದರೂ, ಚಿತ್ರದ ಕಥೆಯಲ್ಲಿ ಅದೇ ಹಳೆಯ ಟಿಪಿಕಲ್ ಹಾರರ್ ಕಥೆಯೇ ಇದೆ. ಮಿಲಿಂದ್ ಗಡಕರ್ ಅವರ ನಿರ್ದೇಶನದಲ್ಲೂ ಹೊಸತನವಿಲ್ಲ.
ಸುದೀಪ್ ಕುಟುಂಬ ಒಂದು ಹೊಸ ಮನೆಗೆ ತೆರಳುತ್ತದೆ. ಅಪರಿಚಿತ ಜಾಗ. ಮನೆಯ ಒಂದು ಪಾರ್ಶ್ವದಲ್ಲಿ ಸಮುದ್ರವಿದ್ದರೆ ಮತ್ತೊಂದು ಪಾರ್ಶ್ವದಲ್ಲಿ ದಟ್ಟ ಕಾಡು. ಹೀಗಾಗಿ ಈ ಚಿತ್ರಣವೇ ಒಂದು ಕೃತಕ ಪರಿಸರವನ್ನು ಸೃಷ್ಟಿಸಿದಂತೆ, ಪ್ರೇಕ್ಷಕರನ್ನು ಬೇಕಂತಲೇ ಹೆದರಿಸಲು ಹೊರಟಂತೆ ಕಂಡರೆ ಆಶ್ಚರ್ಯವಿಲ್ಲ. ಇಡೀ ಮನೆಯಲ್ಲಿ ಗಾಳಿ ಬೆಳಕು ಸ್ವಲ್ಪ ಕಡಿಮೆಯೇ. ಹೀಗೆ ಪೂರ್ತಿಯಾಗಿ ಒಂದು ಪ್ರೇತಾತ್ಮ ಕಾಲಿಡಲು ಪರ್ಫೆಕ್ಟ್ ಸ್ಥಳವೆಂಬಂತೆ ಈ ಮನೆ ಪರಿಸರ ಕಂಡುಬುತ್ತದೆ, ಟಿಪಿಕಲ್ ಭಾರತೀಯ ಹಾರರ್ ಸಿನಿಮಾಗಳಂತೆ.
IFM
ಹೀಗಿರುವಾಗ ಮಧುವಿನ ಪ್ರೇತಾತ್ಮ ಮತ್ತೆ ರಾಜೀವ್ (ಸುದೀಪ್) ಅವರ ಕುಟುಂಬಕ್ಕೆ ಮತ್ತೆ ಎಂಟ್ರಿ ಕೊಡುತ್ತದೆ. ಆದರೆ, ಈ ಬಾರಿ ಒಂದು ಪುಟ್ಟ ಗೊಂಬೆ ಮೂಲಕ ಸುದೀಪ್ ಫ್ಯಾಮಿಲಿಗೆ ಕಾಲಿಡುತ್ತದೆ. ಸುದೀಪ್ ಮಗಳು ರಕ್ಷಾ (ಅಹ್ಸಾಸ್ ಚನ್ನಾ) ಕಾಡಿನಲ್ಲಿ ಅಂಡಲೆಯುವಾಗ ಸಿಕ್ಕಿದ ವಿಚಿತ್ರ ಆಟದ ಬೊಂಬೆಯನ್ನು ಮನೆಗೆ ತರುತ್ತಾಳೆ. ಆದರೆ ಆ ಬೊಂಬೆ ಮಾತ್ರ ಹೆದರಿಕೆ ಹುಟ್ಟಿಸುವ ರೀತಿಯಲ್ಲಿದೆಯೆಂದು ಮನೆಯವರು ಆ ಬೊಂಬೆಯನ್ನು ಮತ್ತೆ ಎಸೆದುಬಿಡುತ್ತಾರೆ. ಆದರೂ, ಆ ಪ್ರೇತಾತ್ಮ ಬೊಂಬೆಯಿಂದ ಬೇರ್ಪಟ್ಟು ಸುದೀಪ್ ಪತ್ನಿ ಆರತಿ (ಅಮೃತಾ)ರನ್ನು ಸೇರಿಕೊಳ್ಳುತ್ತದೆ. ಜೊತೆಗೆ ಸುದೀಪ್ ಪ್ರೀತಿಸುವ ಎಲ್ಲರನ್ನು ಕೊಲ್ಲುವ ಕಾಯಕಕ್ಕೆ ತೊಡಗುತ್ತದೆ. ಒಬ್ಬರಾದ ಮೇಲೆ ಒಬ್ಬರು ಸಾಯತೊಡಗುತ್ತಾರೆ. ಆ ಮೂಲಕ ಅಮ್ಮನೇ ಮಗಳನ್ನೂ ಕೊಲ್ಲುತ್ತಾಳಾ ಎನ್ನುವುದು ಕಥೆಯ ಥ್ರಿಲ್ಲಿಂಗ್ ಅಂಶ.
IFM
ಆದರೆ ಕಥೆ ಕೇಳುವಾಗ ಇರುವ ಥ್ರಿಲ್ಲಿಂಗ್ ಸಿನಿಮಾದಲ್ಲಿ ಇಲ್ಲ. ಭಾರತೀಯ ಟಿಪಿಕಲ್ ಹಾರರ್ ಸಿನಿಮಾ ಹೋಲುವ ಈ ಚಿತ್ರದ ಮೇಲೆ ದೊಡ್ಡ ನಿರೀಕ್ಷೆಯಿಟ್ಟು ತೆರಳಿದರೆ ಖಂಡಿತಾ ಠುಸ್ಸಾಗುವುದು ಗ್ಯಾರೆಂಟಿ!
ಆದರೆ ಈ ಚಿತ್ರದಲ್ಲಿ ಹೊಸತೇನಿದೆ? ಎಂದು ಪ್ರಶ್ನಿಸಿದರೆ ಏನೂ ಇಲ್ಲ. ಕಥೆಯಲ್ಲೂ ಹಾರರ್ ಸಿನಿಮಾಕ್ಕಿರಬೇಕಾದ ಅಂಥಾ ಹುರುಳೇನೂ ಇಲ್ಲ. ಫೂಂಕ್ 1 ನೋಡದವರಿಗೆ ಫೂಂಕ್ 2 ದೊಡ್ಡ ತೊಂದರೆಯಾಗಿ ಪರಿಣಮಿಸುತ್ತದೆ. ಯಾಕೆಂದರೆ, ಫೂಂಕ್ 1 ನೋಡದವರಿಗೆ ಮಧು ಯಾರು? ಆಕೆ ಸುದೀಪ್ ಫ್ಯಾಮಿಲಿಗೆ ಯಾಕೆ ಬರುತ್ತಾಳೆ ಎಂಬುದೇ ತಿಳಿಯುವುದಿಲ್ಲ.
IFM
ನಿಜವಾಗಿ ಹೇಳಬೇಕೆಂದರೆ ಮೊದಲ ಚಿತ್ರಕ್ಕಿಂತಲೂ (ಫೂಂಕ್ 1) ಎರಡನೇ ಭಾಗವಾಗ ಫೂಂಕ್ 2 ಚೆನ್ನಾಗಿದೆ. ಸುದೀಪ್ ಅತ್ಯುತ್ತಮ ಅಭಿನಯ ನೀಡುವುದಕ್ಕೆ ಪ್ರಯತ್ನ ಪಟ್ಟಿರುವುದು ಎದ್ದು ಕಾಣುತ್ತದೆ. ಹೆದರುವ ಸನ್ನಿವೇಶಗಳಲ್ಲಿ ನಿಜಕ್ಕೂ ಸುದೀಪ್ ತನಮಯತೆಯಿಂದ ನಟಿಸಿದ್ದು, ನಿಜಕ್ಕೂ ಹೆದರಿದಂತೆಯೇ ಕಾಣುತ್ತಾರೆ. ಆದರೆ ರಾಮ್ ಗೋಪಾಲ್ ವರ್ಮಾ ಇದಕ್ಕೂ ಮೊದಲು ಬಿಡುಗಡೆಯಾದ ರಣ್ ಚಿತ್ರದಲ್ಲಿ ಸುದೀಪ್ ನೀಡಿದ ಅಭಿನಯದ ಮಟ್ಟಕ್ಕೆ ಸುದೀಪ್ ಇಲ್ಲಿ ತಲುಪುವುದಿಲ್ಲ ಎಂಬುದೂ ಕೂಡಾ ನಿಜ. ಸುದೀಪ್ ಪತ್ನಿಯಾಗಿ ನಟಿಸಿದ ಅಮೃತಾರ ಅಭಿನಯ ಚೆನ್ನಾಗಿದೆ.
ಉಳಿದಂತೆ ಸುಬೀರ್ ಖಾನ್ ದಾಸ್ ಅವರ ಹಿನ್ನೆಲೆ ಸಂಗೀತ ಸ್ವಲ್ಪ ಹೆಚ್ಚೆನಿಸುವಂತೆ ದೊಡ್ಡ ಸ್ವರದಲ್ಲಿದೆ. ಚಂದ್ರಕಾಂತ್ ಮೆಹೆರ್ ಹಾಗೂ ಚಾರ್ಲ್ಸ್ ಮೆಹೆರ್ ಅವರ ಕ್ಯಾಮರಾ ಆಂಗಲ್‌ಗಳು ಮುಂದೆ ಹೀಗೆಯೇ ಇರುತ್ತವೆಂದು ವೀಕ್ಷಕರೇ ಮೊದಲು ಭವಿಷ್ಯ ನುಡಿಯಬಹುದು!
ಹಾಂ ಅಂದ ಹಾಗೆ ಪೂಂಕ್- 3 ಕೂಡಾ ಸದ್ಯದಲ್ಲೇ ಬರಲಿದೆಯೆಂದು ಸ್ವತಃ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ!