ಯೋಗರಾಜ ಭಟ್ಟರ ಚಿತ್ರಗಳಲ್ಲಿ ಮುದ್ದಿನ ಅಮ್ಮನಾಗಿ ಕಾಣಿಸಿಕೊಳ್ಳುವ ಪದ್ಮಜಾ ರಾವ್ ಸಿನಿಮಾ ನಿರ್ದೇಶನ ಮಾಡಲು ಹೊರಟಿದ್ದು ನಿಮಗೆಲ್ಲಾ ಗೊತ್ತು. ಮೂಡಲ ಮನೆ, ಪ್ರೀತಿ ಇಲ್ಲದ ಮೇಲೆ ಮತ್ತಿತರ ಹಲವು ದಾರಾವಾಹಿಗಳಲ್ಲೂ ಖ್ಯಾತನಾಮರಾಗಿರುವ ಪದ್ಮಜಾರ ಹೊಸ ಚಿತ್ರದ ಹೆಸರು 'ತುಂಬಾ ಇಷ್ಟ, ಸ್ವಲ್ಪ ಕಷ್ಟ'.
ಇಂತಿಪ್ಪ ಪದ್ಮಜಾ ಹೇಳೋದು ಹೀಗೆ. ''ನಾನು ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಇದ್ದೇನೆ. ಆದರೆ, ಚಿತ್ರ ನಿರ್ಮಿಸುವಷ್ಟು ನನ್ನ ಬಳಿ ದುಡ್ಡಿಲ್ಲ. ಹಾಗಾಗಿ ನಿರ್ದೇಶನದ ಹಾದಿ ತುಳಿದಿದ್ದೇನೆ. ಆದರೆ, ನಾನು ತುಳಿದ ಹಾದಿಗೆ ನನ್ನ ಜತೆಗೆ ಹೆಗಲು ಕೊಡಲು ಚಿತ್ರರಂಗದ ಹಲವರು ನನ್ನ ಬೆನ್ನಿಗೆ ನಿಂತಿದ್ದಾರೆ'' ಎನ್ನುತ್ತಾರೆ ತುಂಬು ಉತ್ಸಾಹದಿಂದ.
''ನಾನೇನು ಲಾಂಗು- ಮಚ್ಚು ಶೈಲಿಯ ಚಿತ್ರ ಮಾಡೋದೇ ಇಲ್ಲ. ನಾನು ಮಧ್ಯಮ ವರ್ಗದ ಮನೆಮಂದಿಯೆಲ್ಲ ನೋಡುವಂತಹ ಚಿತ್ರ ಮಾಡುತ್ತೇನೆ. 'ಕೊಂಜಂ ಇಷ್ಟಂ ಕೊಂಜಂ ಕಷ್ಟಂ', 'ಬೊಮ್ಮಾರಿಲು' ಹಾಗೂ ಬಸು ಚಟರ್ಜಿಯವರ ಹಲವು ಚಿತ್ರಗಳು ನನಗೆ ಪ್ರೇರಣೆ ನೀಡಿವೆ. ತುಂಬ ತಮಾಷೆಯ, ರೊಮ್ಯಾಂಟಿಕ್ ಆಗಿರುವ ಚಿತ್ರ ನಿರ್ದೇಶಿಸುವುದು ನನ್ನ ಉದ್ದೇಶ'' ಎನ್ನುತ್ತಾರೆ ಪದ್ಮಜಾ.
''ಚಿತ್ರಕಥೆಯ ಸಂಭಾಷಣೆಯನ್ನು ನಾಲ್ಕು ಮಂದಿ ಸೇರಿ ಬರೆಯುತ್ತಿದ್ದೇವೆ. ಯೋಗರಾಜ ಭಟ್ ಅವರು ತುಂಬ ಸಲಹೆ ನೀಡಿದ್ದಾರೆ. ಪ್ರತಿ 30 ಸೆಕೆಂಡುಗಳಿಗೊಮ್ಮೆ ನಗು ತರಿಸಬಲ್ಲ ವಿಚಾರ ಚಿತ್ರದಲ್ಲಿರಬೇಕು ಎಂದಿದ್ದಾರೆ ಅವರು'' ಎಂದು ವಿವರಿಸುತ್ತಾರೆ ಪದ್ಮಜಾ.
ಸದ್ಯ ನಾಯಕ- ನಾಯಕಿಯರ ಹುಡುಕಾಟದಲ್ಲಿದ್ದಾರೆ ಪದ್ಮಜಾ. ದಿಗಂತ್, ಯಶ್, ಐಂದ್ರಿತಾರಲ್ಲಿ ಪದ್ಮಜಾ ಮಾತನಾಡಿದ್ದಾರೆ. ಅಂತಿಮವಾಗಿ ಯಾವುದೂ ನಿರ್ಧಾರವಾಗಿಲ್ಲ.
'ಹಾಗಾದರೆ, ಮುಂಗಾರು ಮಳೆ, ಗಾಳಿಪಟಗಳಲ್ಲಿ ಜತೆಯಾಗಿ ನಟಿಸಿದ ಗೋಲ್ಡನ್ ಸ್ಟಾರ್ ಗಣೇಶ್‌ರನ್ನು ಬಿಟ್ಟೇ ಬಿಡುತ್ತೀರಾ? ಅವರನ್ನು ಚಿತ್ರದ ಪ್ರಮುಖ ಪಾತ್ರಕ್ಕೆ ಕರೆಯೋದಿಲ್ವೇ?' ಎಂದರೆ, ''ಹಾಗಾಗಿದ್ದರೆ ಒಳ್ಳೆಯದಿತ್ತು ಅಂದುಕೊಳ್ಳುತ್ತೇನೆ. ಆದರೆ ಅವರನ್ನು ಕರೆಯುವ ಸಾಮರ್ಥ್ಯ ನನಗಿಲ್ಲ'' ಆದರೆ, ಅನಂತನಾಗ್, ರಂಗಾಯಣ ರಘು ಅವರೆಲ್ಲ ನಮ್ಮ ಜತೆ ಇದ್ದಾರೆ'' ಎಂದರು ಪದ್ಮಜಾ.
''ಚಿತ್ರದ ಹಾಡುಗಳನ್ನು ಯೋಗರಾಜ ಭಟ್ ಹಾಗೂ ಜಯಂತ್ ಕಾಯ್ಕಿಣಿ ಅವರು ಬರೆಯಲಿದ್ದಾರೆ'' ಎಂದು ವಿವರಿಸಿದರು ಪದ್ಮಜಾ.
ಅಂದಹಾಗೆ, ಚಿತ್ರದಲ್ಲಿ ಕಾಸ್ಟ್ಯೂಮ್ ಬಗ್ಗೆ ಪದ್ಮಜಾ ತುಂಬ ಮುತುವರ್ಜಿ ವಹಿಸುತ್ತಾರಂತೆ. ''ಚಿತ್ರದ ನಾಯಕಿಗಂತೂ, ಫ್ಯಾಷನ್ ಚಿತ್ರದಲ್ಲಿನ ಪ್ರಿಯಾಂಕಾ ಛೋಪ್ರಾರಂತೆ ಸೆಕ್ಸೀಯಾಗಿ ವಸ್ತ್ರವಿನ್ಯಾಸ ಮಾಡಲಾಗುತ್ತದೆ. ಈ ಚಿತ್ರಕ್ಕೆಂದೇ ವಿಶೇಷವಾಗಿ ವಸ್ತ್ರವಿನ್ಯಾಸ ಮಾಡಲಿದ್ದೇವೆ. ನಾನೂ ಸೇರಿದಂತೆ ನನ್ನ ಸಹೋದರಿಯರಾದ ನೀರಜಾ ಹಾಗೂ ಶೈಲಜಾ ವಸ್ತ್ರ ವಿನ್ಯಾಸದ ಜವಾಬ್ದಾರಿ ತೆಗೆದುಕೊಂಡಿದ್ದೇವೆ'' ಎನ್ನುತ್ತಾರೆ ಪದ್ಮಜಾ.
''ಹಿಂದಿಯಲ್ಲಿ ಜಬ್ ವಿ ಮೆಟ್, ಘಜನಿಯಂತಹ ಚಿತ್ರಗಳ ವಸ್ತ್ರ ವಿನ್ಯಾಸಗಳೇ ಹೊಸ ಫ್ಯಾಷನ್ ಉಡುಪುಗಳಾಗಿ ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಖ್ಯಾತ ಮಾಲ್‌ಗಳಲ್ಲಿ ಹಿಂದಿ ಚಿತ್ರಗಳಿಗಾಗಿ ವಿನ್ಯಾಸಗೊಳಿಸಿದ ಉಡುಪುಗಳನ್ನು ನೋಡುತ್ತೇವೆ. ಆದರೆ ಕನ್ನಡ ಸಿನಿಮಾದ ವಿನ್ಯಾಸಗಳು ಹೀಗೆ ಮಾಲ್‌ಗಳಿಗೆ ಲಗ್ಗೆಯಿಟ್ಟಿದ್ದು, ನಾನಂತೂ ನೋಡಿಲ್ಲ. ಕನ್ನಡದಲ್ಲಿ ಒಮ್ಮೆಯೂ ಚಿತ್ರದ ವಸ್ತ್ರವಿನ್ಯಾಸ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡವರಿಲ್ಲ. ಆದರೆ ನನ್ನ ಚಿತ್ರದಲ್ಲಿ ವಿನೂತನ ಫ್ಯಾಷನ್‌ಗಳನ್ನು ಪರಿಚಯಿಸುತ್ತೇವೆ. ಅದು ಮಾಲ್‌ಗಳಲ್ಲಿ ತುಂಬಾ ಇಷ್ಟ ಚಿತ್ರದ ವಿನ್ಯಾಸವೆಂದೇ ಪರಿಚಿತವಾಗಬೇಕು. ಹಾಗೆ ಚಿತ್ರದ ವಸ್ತ್ರ ವಿನ್ಯಾಸಕ್ಕೂ ತುಂಬ ಮಹತ್ವ ನೀಡುತ್ತೇವೆ'' ಎನ್ನುತ್ತಾರೆ ಪದ್ಮಜಾ.