ನಿರ್ದೇಶನದತ್ತ ಜಗ್ಗೇಶ್
ಎದ್ದೇಳು ಮಂಜುನಾಥ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೆ ನವರಸನಾಯಕ ಇದೀಗ ನಿರ್ದೇಶನದತ್ತ ಹೆಜ್ಜೆ ಇರಿಸಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.ಇದಕ್ಕೆ ಸ್ವತಃ ಜಗ್ಗೇಶ್ ಹೌದು ಎಂದಿದ್ದಾರೆ. ಚಿತ್ರೋದ್ಯಮಕ್ಕೆ ಬಂದು ಆಗಲೇ 25 ವರ್ಷಗಳಾಗಿವೆ. ಇಷ್ಟು ವರ್ಷದಲ್ಲಿ ಗಾಂಧಿನಗರದ ಮೂಲೆ ಮೂಲೆಗಳಲ್ಲೂ ತಡಕಾಡಿ ಗಳಿಸುವ ಅನುಭವ ಇಂದು ನಿರ್ದೇಶನಕ್ಕೆ ದಾರಿ ಮಾಡಿಕೊಟ್ಟಿದೆ. ನಿರ್ದೇಶನಕ್ಕೆ ಇದು ಸಕಾಲ ಎಂಬುದು ಅವರ ಅನಿಸಿಕೆ.ಚಿತ್ರದ ಪೂರ್ವ ತಯಾರಿಯಲ್ಲಿರುವ ಜಗ್ಗೇಶ್ ಈಗಾಗಲೇ ತಮ್ಮ ಪುತ್ರ ಗುರುರಾಜ್ ಜೊತೆ ಚರ್ಚೆ ನಡೆಸಿದ್ದಾರೆ. ನಾನು ನಿರ್ದೇಶಿಸುವ ಚಿತ್ರ ಗಾಂಧಿನಗರದ ಮಾಮೂಲಿ ಫಾರ್ಮುಲಾಗಳಿಗಿಂತ ಭಿನ್ನವಾಗಿರುತ್ತದೆ ಎನ್ನುತ್ತಾರೆ ಜಗ್ಗೇಶ್. ರಾಜಕಾರಣದಲ್ಲಿ ಬ್ಯುಸಿಯಾಗಿರುವ ಜಗ್ಗೇಶ್ ವರ್ಷಕ್ಕೊಂದು ಚಿತ್ರ ಎಂದು ಮನಸ್ಸು ಮಾಡಿದ್ದಾರೆ. ಅಂದಹಾಗೆ ಇವರ ನಿರ್ದೇಶನದ ಹೊಸ ಚಿತ್ರದಲ್ಲಿ ಇವರು ನಟಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.