ಮತ್ತೊಮ್ಮೆ ಪ್ರೇಮ್ ಕಹಾನಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಎಲ್ಲವೋ ಅಂದಕೊಂಡಂತೆ ಆದರೆ ಚಿತ್ರ ಜುಲೈನಲ್ಲೇ ತೆರೆ ಕಾಣಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರವನ್ನು ಅಗಸ್ಟ್‌ಗೆ ಮುಂದೂಡಲಾಗಿತ್ತು. ಅಗಸ್ಟ್‌ನಲ್ಲಿ ಬಿಡುಗಡೆಯಾಗಿರುವ ರಾಜ್ ಭಯದಿಂದ ಹಿಂಜರಿದ ಚಿತ್ರತಂಡ ಬಿಡುಗಡೆಯನ್ನು ಮತ್ತೆ ಮುಂದಕ್ಕೆ ಹಾಕಿದ್ದಾರೆ.
ಈಗ ಚಿತ್ರವನ್ನು ಸೆಪ್ಟೆಂಬರ್ನಲ್ಲಿ ತೆರೆಗೆ ತರುವುದು ಖಚಿತ ಎನ್ನುತ್ತಿದ್ದಾರೆ ನಿರ್ದೇಶಕ ಚಂದ್ರು. ಆದರೆ ಡೇಟ್ಸ್ ಇನ್ನು ಅಂತಿಮವಾಗಿಲ್ಲ. ಮೊದಲ ವಾರದಲ್ಲಿ ಬಿಡುಗಡೆಯಾದರೂ ಅಚ್ಚರಿ ಪಡಬೇಕಿಲ್ಲ. ಚಿತ್ರದಲ್ಲಿ ಅಜಯ್ ಮತ್ತು ಶೀಲಾ ನಾಯಕ ನಾಯಕಿಯರು.
ಚಿತ್ರದ ಮೇಲೆ ನಾಯಕ ಅಜಯ್ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಕ್ಸ್‌ಕ್ಯೂಸ್ ಮಿ ಚಿತ್ರದ ಮೂಲಕ ನಿರ್ದೇಶಕ ಪ್ರೇಮ್ ನನಗೊಂದು ಉತ್ತಮ ಸಿನಿಮಾ ಜೀವನ ನೀಡಿದರು. ಆದರೆ ನಂತರ ನಾನು ಸಿಕ್ಕಿದ ಸಿನಿಮಾಗಳಿಗೆಲ್ಲ ಸಹಿ ಮಾಡಿ ಎಡವಿ ಬಿದ್ದೆ. ಇಂತಹ ಸಂದರ್ಭ ನನ್ನ ವೃತ್ತಿ ಬದುಕಿಗೆ ಮರುಜೀವ ಕೊಟ್ಟಿದ್ದು ಚಂದ್ರು ಅವರು. ಚಂದ್ರು ಅವರ ತಾಜ್‌ಮಹಲ್ ಮೂಲಕ ನನಗೆ ಮತ್ತೆ ಉತ್ತಮ ಭವಿಷ್ಯ ದೊರಕಿತು. ಇದೀಗ ನಾನು ಅತ್ಯುತ್ತಮವೆನಿಸುವ ಚಿತ್ರಗಳಿಗೆ ಮಾತ್ರ ಸಹಿ ಹಾಕುತ್ತಿದ್ದೇನೆ ಎನ್ನುತ್ತಾರೆ ಅಜಯ್.
ಚಂದ್ರು ನಿರ್ದೇಶನದ ಪ್ರೇಮ್‌ಕಹಾನಿ ಕಥೆ ನನಗೆ ತುಂಬ ಇಷ್ಟವಾಯಿತು. ಚಂದ್ರು ತಮ್ಮ ನಿಜಜೀವನದ ಸನ್ನಿವೇಶಗಳನ್ನು ಚಿತ್ರದಲ್ಲಿ ಬಳಸಿದ್ದಾರೆ. ಕಥೆ ಅದ್ಭುತವಾಗಿದೆ. ಚಿತ್ರದ ಸಂಗೀತದ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿ ಬಂದಿದೆ. ಯುವಪೀಳಿಗೆ ಖಂಡಿತವಾಗಿಯೂ ಈ ಕಥೆಯನ್ನು ಇಷ್ಟಪಡುತ್ತಾರೆ. ಇದು ಬಹುತೇಕರ ಜೀವನದ ಕಥೆಗೆ ಹೋಲುತ್ತದೆ. ಈ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಅಜಯ್.