ಹೆಸರಿಡದ ಸೂಪರ್ ಅರ್ಥ ಧ್ವನಿಸುವ ಕೈಯ ಸಂಕೇತವಿರುವ ಉಪೇಂದ್ರ ನಿರ್ದೇಶನದ ಚಿತ್ರದ ಬಗ್ಗೆ ಜನರ ಕುತೂಹಲ ಹೆಚ್ಚಾಗುತ್ತಿದ್ದಂತೆ, ಗಾಂಧಿನಗರದಲ್ಲಿ ಈ ಬಗ್ಗೆ ತರಹೇವಾರಿ ಬಣ್ಣಬಣ್ಣದ ಗಾಸಿಪ್‌ಗಳೂ ಹುಟ್ಟಿಕೊಳ್ಳುತ್ತಿವೆ. ಸಂಗೀತ, ಸಾಹಿತ್ಯ, ನಿರ್ದೇಶನ ಎಲ್ಲವೂ ಉಪ್ಪಿಯದಂತೆ, ಲಂಡನ್‌ನಲ್ಲೇ ಶೂಟಿಂಗ್ ನಡೆಸುತ್ತಾರಂತೆ, 20 ಕೋಟಿ ರೂ ವೆಚ್ಚವಂತೆ ಎಂಬ ದಿನಕ್ಕೊಂದು ಅಂತೆಕಂತೆಗಳ ಸಂತೆಯಲ್ಲಿ ಈಗ ಮತ್ತೊಂದು ಗಾಸಿಪ್ ತೂರಿಕೊಂಡಿದೆ. ಅದೇನೆಂದರೆ, ಈ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸುತ್ತಿದ್ದಾರೆ ಎಂಬ ಗಾಳಿ ಸುದ್ದಿ.
ಇದು ಹೌದೋ, ಸುಳ್ಳೋ ಗೊತ್ತಿಲ್ಲ. ಯಾಕೆಂದರೆ ಶಂಖದಿಂದ ತೀರ್ಥ ಹೋರಬಂದಿಲ್ಲ, ಅರ್ಥಾತ್ ಉಪೇಂದ್ರರೇ ಸ್ವತಃ ಘೋಷಿಸಿಲ್ಲ. ಆದರೆ, ಸೂಪರ್ ಹೆಸರೆಂದು ಹೇಳಿಕೊಳ್ಳುವ ಈ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿಯಂತೆ ಎಂಬುದು ಜಗಜ್ಜಾಹೀರಾಗುತ್ತಿದೆ. ಈ ಚಿತ್ರ ಹಿಂದಿಯಲ್ಲೂ ಹೊರಬರುತ್ತಿರುವುದರಿಂದ, ಹಾಗೂ ಕನ್ನಡದ ಜತೆಜತೆಗೇ ತೆಲುಗು, ತಮಿಳು ಭಾಷೆಯಲ್ಲೂ ಬಿಡುಗಡೆ ಕಾಣುತ್ತಿರುವುದರಿಂದ ಉಪೇಂದ್ರ ಐಶ್ವರ್ಯಾ ರೈ ಅವರನ್ನು ಕನ್ನಡಕ್ಕೆ ತರಲು ಚಿಂತಿಸುತ್ತಿದ್ದಾರೆ. ಇದರಿಂದ ಬಹುಭಾಷೆಯ ಮಾರ್ಕೆಟಿಂಗ್ ಕೂಡಾ ಸುಲಭವಾಗುತ್ತದೆ ಎಂಬುದು ಉಪ್ಪಿ ಲೆಕ್ಕಾಚಾರವಂತೆ.
20 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದಾರೆ. ಇದುವರೆಗೆ ನಿರ್ದೇಶಿಸಿದ್ದ ಹಲವು ಚಿತ್ರಗಳಿಗಿಂತ ಭಿನ್ನವಾದ ಕತೆಯನ್ನು ಸಿದ್ಧಪಡಿಸಿದ್ದಾರಂತೆ ಉಪ್ಪಿ.
ಆದರೆ ಇದರ ಬಗ್ಗೆ ಕೇಳಲು ಹೋದರೆ, ಪ್ಲೀಸ್ ಏನೂ ಕೇಳಬೇಡಿ. ಈಗಲೇ ಏನೂ ಹೇಳುವುದಿಲ್ಲ ಎಂದು ಹುಸಿ ನಗುತ್ತಾರೆ. ಏನೇ ಆದರೂ, ಹಲವು ಬಾಲಿವುಡ್ ನಾಯಕಿಯರನ್ನು ಕನ್ನಡಕ್ಕೆ ಕರೆ ತಂದಿರುವ ಉಪ್ಪೇಂದ್ರರಿಗೆ ಐಶ್ವರ್ಯಾ ರೈಯನ್ನು ಕನ್ನಡಕ್ಕೆ ತರುವುದು ಕಷ್ಟವಾಗಲಾರದು.