ಇದು ಮಹೇಶ್ ಬಾಬು ಪುರಾಣ
![](/img/cm/searchGlass_small.png)
ಈಗೇನಿದ್ದರೂ ಹಣ, ಹೆಸರು ಅಷ್ಟೇ. ಕಷ್ಟದಲ್ಲಿದ್ದಾಗ ಯಾರೂ ಕೇಳುವವರಿಲ್ಲ ಹೀಗೆಂದವರು ನಿರ್ದೇಶಕ ಮಹೇಶ್ ಬಾಬು. ಅವರು ಹೀಗೆ ಹೇಳುವುದಕ್ಕೂ ಕಾರಣಗಳಿವೆ. ಏಕೆಂದರೆ ಪರಮೇಶ ಪಾನ್‌ವಾಲಾ ಸೋತ ಬಳಿಕ ಏಕಾಏಕಿ ಫ್ಲಾಪ್ ನಿರ್ದೇಶಕ ಎಂಬ ಪಟ್ಟ ಅಲಂಕರಿಸಬೇಕಾದ ಅನಿವಾರ್ಯತೆಗೆ ಸಿಲುಕಿದರು ಮಹೇಶ್ ಬಾಬು.ಆ ಸಂದರ್ಭದಲ್ಲಿ ಆಶಾಕಿರಣವಾಗಿ ಗೋಚರಿಸಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಯಾರನ್ನೇ ಆದರೂ ಪಾಸಿಟಿವ್ ಆಗಿ ಹುರಿದುಂಬಿಸುವುದು ಅವರಲ್ಲಿ ಕಂಡುಕೊಂಡ ಗುಣ. ಒಂದು ಚಿತ್ರದ ಸೋಲು, ಗೆಲುವುಗಳ ಕಾರಣದಿಂದ ಸಂಬಂಧಗಳನ್ನು ಅವರು ಯಾವತ್ತೂ ಹಾಳು ಮಾಡಿಕೊಂಡಿಲ್ಲ. ಗೆದ್ದಾಗ ನಮ್ಮೊಂದಿಗೆ ಸಂಭ್ರಮಿಸುತ್ತಾರೆ. ಸೋತಾಗ ಸಾಂತ್ವನ ಹೇಳುತ್ತಾರೆ ಎಂಬ ಮೆಚ್ಚುಗೆಯ ಮಾತು ಮಹೇಶ್ ಬಾಬು ಅವರದ್ದು.ಇದರಿಂದ ಉತ್ಸಾಹಗೊಂಡಿರುವ ಮಹೇಶ್ ಬಾಬು ಶಿವರಾಜ್ ಕುಮಾರ್ ಜೊತೆ ಇನ್ನೊಂದು ಚಿತ್ರ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಮೊದಲ ಚಿತ್ರವೇ ಸಾಧಾರಣವಾಗಿದ್ದರಿಂದ ಮತ್ತೊಂದು ಚಿತ್ರದಲ್ಲಿ ನಟಿಸುವಂತೆ ಕೇಳುವುದು ಹೇಗೆ ಎಂಬ ಸಂಕೋಚ ಅವರದ್ದು. ಪರಮೇಶ್ ಪಾನ್‌ವಾಲಾ ಚಿತ್ರ ಸೋಲಲು ನಾನೇ ಕಾರಣ. ಶಿವಣ್ಣ ಅಲ್ಲ. ಅವರು ಸಾಕಷ್ಟು ಅನುಭವಿ. ಅವರನ್ನು ನಿರ್ದೇಶಕರಾದ ನಾವು ಸರಿಯಾಗಿ ಬಳಸಿಕೊಳ್ಳಬೇಕು. ಅವರು ಅಭಿನಯಿಸಿದ ಚಿತ್ರವೊಂದು ಸೋತಿತು ಎಂದರೆ ನಾವು ಅವರನ್ನು ಬಳಸಿಕೊಳ್ಳುವಲ್ಲಿ ಸೋತೆವು ಎಂದರ್ಥ ಎನ್ನುತ್ತಾರೆ ಮಹೇಶ್ ಬಾಬು. ಅಂತೂ ಶಿವಣ್ಣ ಒಪ್ಪಿದರೆ ಮಹೇಶ್ ಬಾಬು ಬತ್ತಳಿಕೆಯಿಂದ ಮತ್ತೊಂದು ಚಿತ್ರ ಬರಲಿದೆ.