ಆಸ್ಕರ್ ಎಂದಾಕ್ಷಣ ನಮಗೆಲ್ಲಾ ತಟ್ಟನೆ ನೆನಪಾಗುವುದು ಹಾಲಿವುಡ್ ಚಿತ್ರಗಳು, ಸ್ಲಂ ಡಾಗ್ ಚಿತ್ರ ಮತ್ತು ರೆಹಮಾನ್. ಅದು ಬಿಡಿ. ಕನ್ನಡದಲ್ಲೂ ಆಸ್ಕರ್ ಬರುತ್ತಿದೆ. ಇದೇನಪ್ಪಾ ನಮ್ಮಲ್ಲೂ ಆಸ್ಕರ್ ಆವಾರ್ಡ್ ಕೊಡಲು ಶುರುಮಾಡಿಬಿಟ್ಟರಾ? ಅಂದುಕೊಳ್ಳಬೇಡಿ. ಆಸ್ಕರ್ ಎಂಬುದು ಕನ್ನಡದಲ್ಲಿ ತಯಾರಾಗುತ್ತಿರುವ ಹೊಸ ಚಿತ್ರದ ಶೀರ್ಷಿಕೆ.
ಈಗಾಗಲೇ ಆಸ್ಕರ್ ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣ ಮುಕ್ತಾಯಗೊಂಡಿದೆ. ಕೃಷ್ಣ ಈ ಚಿತ್ರದ ನಿರ್ದೇಶಕರು. ಶಿವು ಬೆಳವಾಡಿ ಈ ಚಿತ್ರದ ನಿರ್ಮಾಪಕರು. ಈ ಚಿತ್ರ ಸಂಪೂರ್ಣ ಫ್ಯಾಮಿಲಿ ಡ್ರಾಮ. ಇಲ್ಲಿ ನಾಯಕ ಲೇಖಕ. ಆಸ್ಕರ್ ಹೆಸರಿನ ಕೃತಿಯೊಂದನ್ನು ಬರೆಯುತ್ತಿರುತ್ತಾನೆ. ಅದನ್ನು ಬರೆದು ಪ್ರಶಸ್ತಿ ತನ್ನದಾಗಿಸಿಕೊಳ್ಳಬೇಕೆಂಬ ಹಂಬಲದಲ್ಲಿರುತ್ತಾನೆ. ನಾಯಕಿ ಆತನ ಪತ್ನಿ. ಆಸ್ಕರ್ ಕಥೆಯನ್ನು ಪೂರ್ಣಗೊಳಿಸುವಲ್ಲಿ ನಾಯಕಿ ನಾಯಕನಿಗೆ ಸಾಥ್ ನೀಡುವಳೇ? ಎಂಬುದು ಈ ಚಿತ್ರದ ಎಳೆ ಎನ್ನುತ್ತಾರೆ ನಿರ್ದೇಶಕ ಕೃಷ್ಣ. ಮಾರ್ಚ್ ತಿಂಗಳಲ್ಲಿ ಖಡಾಖಂಡಿತವಾಗಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತೇನೆ ಎನ್ನುತ್ತಾರೆ ನಿರ್ಮಾಪಕ ಶಿವು ಬೆಳವಾಡಿ.