ಇತ್ತೀಚೆಗೆ ಆದಿಚುಂಚನಗಿರಿಮಠ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವುದಾಗಿ ಓಂ ಸಾಯಿಪ್ರಕಾಶ್ ಹೇಳಿರುವ ಬೆನ್ನಿಗೆ, ಈಗ ಮತ್ತೊಂದು ಸುದ್ದಿ ಗಾಂಧಿನಗರದಲ್ಲಿ ಹಬ್ಬಿದೆ.
ನಡೆದಾಡುವ ದೇವರು ಎಂದೇ ಖ್ಯಾತರಾದ ಸಿದ್ಧಗಂಗಾ ಮಠದ ಶ್ರೀ ಶ್ರೀ ಶಿವಕುಮಾರಸ್ವಾಮಿ ಅವರು ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಚಿತ್ರ ಸ್ವಾಮೀಜಿಯವರ ಜೀವನಕ್ಕೆ ಸಂಬಂಧಪಟ್ಟಿರುವುದಲ್ಲ. ಬದಲಿಗೆ ಸಿದ್ಧಗಂಗೆಯ ಮಠದಲ್ಲಿ ನಡೆಯುವ ಕಥೆ. ಚಿತ್ರದ ಹೆಸರು 'ಯೋಗರಾಜ'.
ಇದನ್ನು ನಿರ್ದೇಶಿಸುತ್ತಿರುವುದು ದಯಾಳ್ ಪದ್ಮನಾಭನ್ ಎಂಬುದು ಎಲ್ಲರಿಗೂ ಗೊತ್ತಿರುವಂತದ್ದೇ. ಚಿತ್ರದ ನಾಯಕಿಯಾಗಿ ನೀತು ಅಭಿನಯಿಸುತ್ತಿದ್ದಾರೆ.
ಚಿತ್ರದ ನಾಯಕಿ ಸಿದ್ಧಗಂಗೆ ಮಠದಲ್ಲಿ ವ್ಯಾಸಂಗ ಮಾಡಿ ಆಡಳಿತಾಧಿಕಾರಿಯಾಗಿ ನೇಮಕವಾಗುವ ದೃಶ್ಯದ ಶೂಟಿಂಗ್ ಅನ್ನು ಸಹ ಮಠದಲ್ಲೇ ಇಟ್ಟುಕೊಂಡಿದ್ದಾಗ, ಸ್ವಾಮೀಜಿಯ ಪಾತ್ರಧಾರಿಯ ಹುಡುಕಾಟದಲ್ಲಿ ಪದ್ಮನಾಭನ್ ನಿರತರಾಗಿದ್ದರು. ಅವರಿಗೆ ದೇವರು ಪ್ರತ್ಯಕ್ಷವಾದಂತೆ ಶಿವಕುಮಾರ ಸ್ವಾಮೀಜಿ ಕಥೆಯ ಎಳೆಯನ್ನು ಕೇಳಿ, ಸ್ವಾಮೀಜಿ ದೃಶ್ಯದಲ್ಲಿ ಬಂದು ಹೋಗಲು ಒಪ್ಪಿಗೆ ಸೂಚಿಸಿದ್ದಾರೆ ಎಂಬ ವದಂತಿ ಇದೆ.
ಎಲ್ಲವೂ ಅಂದುಕೊಂಡಂತಾದರೆ ಕರ್ನಾಟಕ ರತ್ನ, ಡಾ. ಶಿವಕುಮಾರ ಸ್ವಾಮೀಜಿಯವರನ್ನು ಅಸಂಖ್ಯಾತ ಭಕ್ತರು ತೆರೆಯ ಮೇಲೆ ನೋಡುವ ಅವಕಾಶ ದೊರಕಲಿದೆ ಎಂದು ದಯಾಳ್ ಹೇಳಿದ್ದಾರೆ.