ತಾನು ಪ್ರೀತಿಯಲ್ಲಿ ಬಿದ್ದಿರುವುದಾಗಿ ಘಂಟಾಘೋಷವಾಗಿ ಸಾರಿದ ನಂತರ 'ಜಾಕಿ' ಹುಡುಗಿ ಭಾವನಾಗೆ ಹೆತ್ತವರು ಮದುವೆ ಮಾಡಿಸಲು ಹೊರಟಿದ್ದಾರೆ ಎಂಬ ಸುದ್ದಿಯನ್ನು ಮಲಯಾಳಿ ಸುಂದರಿ ತಳ್ಳಿ ಹಾಕಿದ್ದಾರೆ. ಸದ್ಯಕ್ಕಂತೂ ಮದುವೆಯಾಗುವ ಯಾವುದೇ ಉದ್ದೇಶ ನನ್ನಲ್ಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ತಾನು ಮದುವೆಯಾಗುತ್ತಿದ್ದೇನೆ ಎಂದು ಸುದ್ದಿಯಾಗಿರುವುದೇ ಅವರಿಗೆ ಅಸಮಾಧಾನ ತಂದಂತಿದೆ. ಮದುವೆಯಾಗುತ್ತೇನೆ ಎಂದು ನಾನು ಯಾವತ್ತೂ ಎಲ್ಲಿಯೂ ಹೇಳಿಲ್ಲ. ನನ್ನ ಹೆತ್ತವರೂ ಹೇಳಿಲ್ಲ. ಹಾಗಿದ್ದರೂ ಸುದ್ದಿಯಾಗಿದ್ದು ಹೇಗೆ ಎಂದು ಪ್ರಶ್ನಿಸಿರುವ ಭಾವನಾ, ಪ್ರಸಕ್ತ ನಾನು ನಟನೆಯಲ್ಲೇ ವ್ಯಸ್ತಳಾಗಿದ್ದೇನೆ. ಈಗಂತೂ ಮದುವೆಗೆ ಬಿಡುವಿಲ್ಲ ಎಂದು ಘಾಸಿಯಾದ ಅಭಿಮಾನಿಗಳ ಹೃದಯಗಳಿಗೆ ತೇಪೆ ಹಚ್ಚಲು ಯತ್ನಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜತೆಗಿನ 'ಜಾಕಿ' ಸೂಪರ್ ಡ್ಯೂಪರ್ ಹಿಟ್ ಆದ ನಂತರ, ರಿಯಲ್ ಸ್ಟಾರ್ ಉಪೇಂದ್ರ ಜತೆಗಿನ ಒಂದು ಚಿತ್ರವನ್ನೂ ಒಪ್ಪಿಕೊಂಡಿರುವ ಭಾವನಾಗೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳಲ್ಲಿ ಹೆಸರು ಮಾಡುವ ಆಸೆಯಂತೆ. ಅದಕ್ಕೂ ಮೊದಲು ಮದುವೆಯಾಗುವ ಪ್ರಶ್ನೆಯೇ ಇಲ್ಲ. ಹಬ್ಬಿರುವುದೆಲ್ಲ ಗಾಳಿಸುದ್ದಿ. ಅದನ್ನೆಲ್ಲ ನೀವು ಕಿವಿಗೆ ಹಾಕಿಕೊಳ್ಳಬೇಡಿ ಎಂದಿದ್ದಾರೆ.
ಇತ್ತೀಚೆಗಷ್ಟೇ ಪತ್ರಿಕೆಯೊಂದರ ಜತೆ ಮಾತನಾಡಿದ್ದ ಭಾವನಾ, ತಾನು ಓರ್ವ ನಟನನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದರು. ಆದರೆ ಆತನ ಹೆಸರು, ಯಾವ ಭಾಷೆ ಎಂಬುದನ್ನೆಲ್ಲ ಬಹಿರಂಗಪಡಿಸಲು ನಿರಾಕರಿಸಿದ್ದರು.
ಇದರ ನಂತರ ಆಕೆಗೆ ಮದುವೆ ಮಾಡಿಸಲು ಹೆತ್ತವರು ಹೊರಟಿದ್ದಾರೆ, ಸೂಕ್ತ ಗಂಡಿಗೆ ಹುಡುಕಾಟ ನಡೆಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅವೆಲ್ಲವೂ ಸುಳ್ಳು ಎಂದು ಭಾವನಾ ಸಾರಿದ್ದಾರೆ.