ಹಲವಾರು ಚಿತ್ರಗಳಲ್ಲಿ ಹೆಸರು ಮಾಡಿರುವ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಗನಲ್ಲ ಈತ, ಅವರ ಸಹೋದರ ಗುರುಮೂರ್ತಿ ಮಗ. ಗುರುಮೂರ್ತಿ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಹೆಸರು ಮಾಡಿರುವವರು. ತನ್ನ ಮಗ ತ್ರಿಶೂಲ್ ಓಂಕಾರ್‌ನನ್ನು ಈಗ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ, ಅದೂ ಅದ್ಧೂರಿಯಾಗಿ.
ರಾಜಕಾರಣದಂತೆ ಚಿತ್ರರಂಗವೂ ಕೌಟುಂಬಿಕ ನೆಲೆಯಲ್ಲೇ ಸಾಗುತ್ತಿದೆ ಎಂಬ ಟೀಕೆಗಳು ಬರುತ್ತಿರುವುದನ್ನು ಯಾರೊಬ್ಬರೂ ಲೆಕ್ಕಿಸಿದಂತಿಲ್ಲ. ದೊಡ್ಡ ದೊಡ್ಡ ಕುಳಗಳೇ ಈ ನಿಟ್ಟಿನಲ್ಲಿ ಹಿಂಜರಿಕೆ ಹೊಂದಿಲ್ಲದೇ ಇರುವಾಗ ಉಳಿದವರು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂಬ ನಿರ್ಲಕ್ಷ್ಯವೂ ಇದಕ್ಕೆ ಕಾರಣವಿರಬಹುದು.
ಬಿಡಿ, ಈಗ ಕುಡಿ ಮೀಸೆಯ ತ್ರಿಶೂಲ್ ಓಂಕಾರ್ ನಾಯಕನಾಗಿ ನಟಿಸುತ್ತಿರುವ ಚಿತ್ರದ ಹೆಸರು 'ಹೊಸಬ'. ಇದನ್ನು ನಿರ್ದೇಶಿಸುತ್ತಿರುವುದು ಥ್ರಿಲ್ಲರ್ ಮಂಜು. ಜತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಕೂಡ.
'... ಫೀಲ್ಡಿಗೆ' ಎಂಬ ಉಪ ಶೀರ್ಷಿಕೆಯೂ ಇರುವುದರಿಂದ ಮತ್ತು ಇದನ್ನು ಮಂಜು ನಿರ್ದೇಶಿಸುತ್ತಿರುವುದರಿಂದ ಆಕ್ಷನ್ ಚಿತ್ರ ಎಂದು ಯಾರು ಬೇಕಾದರೂ ಹೇಳಬಹುದು. ಆದರೆ ಬರೇ ಆಕ್ಷನ್ ಆಗಿರುವುದಿಲ್ಲ, ಇದು ಆಕ್ಷನ್ ಕಮ್ ಲವ್ ಸ್ಟೋರಿ ಎಂದು ಮಂಜು ಹೇಳಿಕೊಂಡಿದ್ದಾರೆ.
ನಾಯಕಿ, ಕಲಾವಿದರು, ಸಂಗೀತ ನಿರ್ದೇಶಕ, ತಂತ್ರಜ್ಞರು -- ಹೀಗೆ ಯಾವ ಆಯ್ಕೆಯೂ ನಡೆದಿಲ್ಲ. ಮಾರ್ಚ್ ತಿಂಗಳಲ್ಲೇ ಮುಹೂರ್ತ ನಡೆಸುವ ಉದ್ದೇಶವಿದೆ. ಹಳ್ಳಿ ಮತ್ತು ನಗರದ ನಡುವಿನ ಕಥೆಯನ್ನು ಬಳಸಿಕೊಳ್ಳಲಾಗಿದೆಯಂತೆ.
ಓಂಕಾರ್ ಇದ್ದಕ್ಕಿದ್ದಂತೆ ಸಿನಿಮಾ ರಂಗಕ್ಕೆ ಬಂದವರಲ್ಲ. ಚಿಕ್ಕಂದಿನಿಂದಲೇ ಚಿಕ್ಕಪ್ಪ ಮಂಜು ಸಾರಥ್ಯದಲ್ಲಿ ನಿಧಾನವಾಗಿ ಎಲ್ಲವನ್ನೂ ಆವಾಹಿಸಿಕೊಂಡವರು. ಇತ್ತೀಚೆಗಷ್ಟೇ ಹಾಂಕಾಂಗ್‌ನಲ್ಲಿ ಆಕ್ಷನ್ ತರಬೇತಿ ಮುಗಿಸಿಕೊಂಡು ಬಂದಿದ್ದಾರೆ. ಮಾರ್ಷಲ್ ಆರ್ಟ್ಸ, ಕುಂಗ್‌ಫು, ಕರಾಟೆಗಳು ಸರಾಗವಾಗಿವೆ. ಡ್ಯಾನ್ಸ್ ಅಂತೂ ಬಾಲ್ಯದಿಂದಲೇ ಕರಗತ. ನಟನಾಗಲು ಏನೆಲ್ಲ ಬೇಕೋ, ಅದೆಲ್ಲವೂ ನನ್ನಲ್ಲಿದೆ ಎಂದು ತ್ರಿಶೂಲ್ ಹೇಳಿದ್ದಾರೆ.
ಚಿತ್ರರಂಗವೆನ್ನುವುದು ಅದೃಷ್ಟದ ವೇದಿಕೆ. ಇಲ್ಲಿ ಬರುವವರು ಹಲವರು, ಉಳಿಯುವವರು ಮಾತ್ರ ಕೆಲವರು. ಅದರಲ್ಲಿ ತ್ರಿಶೂಲ್ ಓಂಕಾರ್ ಅವರದ್ದು ಯಾವುದು ಎನ್ನುವುದು ತಿಳಿಯಲು ಕೆಲ ವರ್ಷಗಳೇ ಸಾಕು. ಏನಂತೀರಾ?