ಥ್ರಿಲ್ಲರ್ ಮಂಜು ಸಾಹಸಕ್ಕೆ ಕೊನೆಯೇ ಇಲ್ಲ. ದಿನಕ್ಕೊಂದು ಹೊಸ ಸಾಹಸದ ಮೂಲಕ ಸುದ್ದಿಯಾಗುತ್ತಾರೆ. ಇದೀಗ ಅವರು ಮತ್ತೆ ನಾಯಕರಾಗಲು ಹೊರಟಿದ್ದಾರೆ.
ಹೌದು, ಡ್ರಾಗನ್ ಹೆಸರಿನ ಚಿತ್ರಕ್ಕೆ ಇವರು ನಾಯಕ. ಇತ್ತೀಚೆಗೆ ನಿರ್ದೇಶನದತ್ತ ಹೆಚ್ಚು ಒಳವು ತಾಳಿದ್ದ ಇವರು ಈಗ ಏಕಾಏಕಿ ಮತ್ತೊಮ್ಮೆ ನಾಯಕರಾಗಿ ತೆರೆಯ ಮೇಲೆ ಮಿಂಚಲು ಮುಂದಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿಯಾಗಿರುವ ಇವರ ನಿರ್ದೇಶನದ ಜಯಹೇ ಚಿತ್ರದಿಂದ ಸ್ಪೂರ್ತಿಗೆ ಒಳಗಾಗಿರುವ ಇವರು ತಮ್ಮ ಚಾರ್ಮ್ ಇನ್ನೂ ಇದೆ ಎನ್ನುವ ವಿಶ್ವಾಸದ ಮೇಲೆ ಮತ್ತೆ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ಬಂದು ನಿಂತಿದ್ದಾರೆ.
ಮಹೇಶ್ ಕುಮಾರ್ ಎಂಬವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಹೆಸರು ನಾಯಕನಿಗೆ ತಕ್ಕಂತೆ ಸಾಹಸ ಪ್ರದಾನ ಚಿತ್ರ. ನಿರ್ದೇಶಕರ ಮೊದಲ ಯತ್ನ ಸಹ ಆಗಿದೆ ಎನ್ನುವುದು ವಿಶೇಷ. ಇದಕ್ಕೂ ಮುನ್ನ ಕೆಲ ಧಾರವಾಹಿಯನ್ನು ನಿರ್ದೇಶಿಸಿರುವ ಅನುಭವ ಚಿತ್ರ ನಿರ್ದೇಶಕರಿಗಿದೆ. ಚಿತ್ರವನ್ನು ಹೇಗೆ ನಿರ್ದೇಶಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
ರಾಜ್ ಭಾಸ್ಕರ್ ಸಂಗೀತ, ವಿನಾಯಕ್ ಅವರ ಸಂಕಲನ ಚಿತ್ರಕ್ಕಿದೆ. ರವಿರೆಡ್ಡಿ ಎಂಬ ಹೊಸ ಪರಿಚಯ ಈ ಚಿತ್ರದಲ್ಲಿ ಆಗಲಿದ್ದು, ಇವರು ಇಲ್ಲಿ ಎರಡನೇ ನಾಯಕರಾಗಿ ಅಲ್ಲ ಬದಲಾಗಿ ಖಳನಾಯಕರಾಗಿ ಕಾಣಿಸಲಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಇನ್ನೊಬ್ಬ ಹೊಸ ಖಳನಟನ ಪರಿಚಯವೂ ಆಗಲಿದೆ. ಚಿತ್ರಕ್ಕೆ ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗದ ಆಯ್ಕೆ ಆಗಬೇಕಿದೆ. ಸಿಮ್ರಾನ್ ಮೂವಿ ಮೇಕರ್ಸ್‌ಗೆ ಎರಡನೇ ಚಿತ್ರ ಇದಾಗಿದೆ. ಶಶಿಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ನಾರದ ವಿಜಯ ಇವರ ಮೊದಲ ಚಿತ್ರ. ಅಕ್ಟೋಬರ್ 18ರಂದು ಚಿತ್ರದ ಮುಹೂರ್ತ ನಡೆಯಲಿದ್ದು, ನಿರಂತರ 25 ದಿನಗಳ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗುತ್ತಿದೆ.