ಬಹುದಿನ ಜಾಹೀರಾತು ಹಾಗೂ ಸುದ್ದಿಯ ಮೂಲಕವೇ ಪ್ರಚಾರ ಪಡೆಯುತ್ತಿದ್ದ ಕಾಫಿ ಶಾಫ್ ಬಿಡುಗಡೆಗೆ ಹಸಿರು ನಿಶಾನೆ ಪಡೆದುಕೊಂಡಿದೆಯಂತೆ. ಹೌದು, ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ 'ಯು/ಎ' ಪ್ರಮಾಣಪತ್ರ ಸಿಕ್ಕಿದೆ. ಗೀತಾ ಕೃಷ್ಣ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರ ಸಾರ್ವಜನಿಕ ವಲಯದಲ್ಲಿ ಬಹು ನಿರೀಕ್ಷೆ ಹಾಗೂ ಕಾತರವನ್ನು ಮೂಡಿಸಿದ್ದು, ಬಿಡುಗಡೆಗಾಗಿ ಅಭಿಮಾನಿಗಳು ಈಗಾಗಲೇ ಜಾತಕ ಪಕ್ಷಿಯಂತೆ ಕಾದಿದ್ದಾರೆ ಎನ್ನಲಾಗಿದೆ. ಜೊತೆಗೆ, ವಿಶೇಷವೆಂಬಂತೆ ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿ ಕೂಡ ಹರ್ಷ ವ್ಯಕ್ತಪಡಿಸಿದ್ದು, ಬೆನ್ನುತಟ್ಟಿ ಪ್ರೋತ್ಸಾಹಿಸಿದೆ ಎನ್ನಲಾಗಿದೆ.
ಚಿತ್ರದ ಬಿಡುಗಡೆ ಅತ್ಯಂತ ಶೀಘ್ರವೇ ಆಗಲಿದೆ ಎನ್ನುತ್ತಿರುವ ನಿರ್ಮಾಪಕರು ದಿನಾಂಕವನ್ನು ಪ್ರಕಟಿಸುತ್ತಿಲ್ಲ. ಹೊಸಬರನ್ನೇ ಒಳಗೊಂಡು ನಿರ್ಮಾಣಗೊಂಡಿರುವ ಈ ಚಿತ್ರ ಇನ್ನೊಂದು ಪ್ರೇಮಕಥೆಯಾಗಿದ್ದು, ಆದರೆ ವಿಭಿನ್ನವಾಗಿ ಸಿದ್ಧಪಡಿಸಲಾಗಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. ವರ್ಷಗಳ ಕಾಲ ಚಿತ್ರೀಕರಣಗೊಂಡು ಬಹಳ ದಿನಗಳಿಂದ ಸುದ್ದಿಯಾಗಿದ್ದ ಈ ಚಿತ್ರ ಇದೀಗ ತೆರೆಗೆ ಬರಲು ಸಜ್ಜಾಗಿರುವುದು ನಿಜಕ್ಕೂ ಒಂದು ಉತ್ತಮ ಬೆಳವಣಿಗೆ.
ತೆಲುಗು ನಟ ಶಶಾಂಕ್, ಬಿಯಂಕಾ ದೇಸಾಯಿ ಮುಖ್ಯಪಾತ್ರದಲ್ಲಿರುವ ಚಿತ್ರದ ಪ್ರಮುಖ ಆಕರ್ಷಣೆ ಬೇಬಿ ಶ್ರೇಯಾ. ಈ ಚಿತ್ರ ಕೇವಲ ಕನ್ನಡದಲ್ಲಿ ಮಾತ್ರವಲ್ಲ ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಸಿದ್ಧಗೊಳ್ಳುತ್ತಿರುವುದರಿಂದ ಕೊಂಚ ವಿಳಂಬವಾಗಿದೆಯಂತೆ. ಆಯಾ ಭಾಷೆ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಚಿತ್ರೀಕರಿಸಬೇಕಾಗಿ ಬಂದಿದ್ದರಿಂದ ಬಿಡುಗಡೆ ತಡವಾಯಿತು ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನು ಯಾವುದೇ ವಿಳಂಬ ಆಗದು ಎನ್ನುವುದು ಚಿತ್ರದ ಸಂಗೀತ ನಿರ್ದೇಶಕ ಗೀತಾಕೃಷ್ಣ ಅಭಿಪ್ರಾಯ.