ಕೊನೆಗೂ ಎಂದಿರನ್ ಚಿತ್ರಕ್ಕೆ ಸವಾಲಾಗಿ ಬಿಡುಗಡೆ ಆಗಿರುವ ಹೃದಯದಲಿ ಇದೇನಿದು ಚಿತ್ರ ಎಂದಿರನ್ ಮಟ್ಟಕ್ಕೆ ಓಡೀತೇ ಎಂದು ಹೋಲಿಸಲಾಗದಿದ್ದರೂ, ಪರವಾಗಿಲ್ಲ ಎನ್ನುವ ರೀತಿಯಲ್ಲಿ ಚಿತ್ರಮಂದಿರದಲ್ಲಿ ಓಡುತ್ತಿದೆ.
ಹೊಸಬರ ಹೊಸ ಪ್ರಯತ್ನಕ್ಕೆ ಜನ ಕೈ ಹಿಡಿದಿದ್ದಾರೆ. ಇದರಿಂದ ಚಿತ್ರ ಗೆಲುವಿನ ಹಾದಿಯಲ್ಲಿದೆ. ಒಂದೆಡೆ ಎಂದಿರನ್ ಕ್ರೇಜ್ ಇದ್ದರೂ ನಗರದಲ್ಲಿ ಬಿಡುಗಡೆ ಕಂಡಿರುವ ಈ ಚಿತ್ರ ಚೆನ್ನಾಗಿಯೇ ಓಡುತ್ತಿದೆ. ಐದು ಸುಮಧುರ ಹಾಡುಗಳು ಚಿತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ.
ನಿರ್ದೇಶಕ ಶಿವನ್ ಅವರ ಪ್ರಯತ್ನಕ್ಕೆ ಇಲ್ಲಿ ಹ್ಯಾಟ್ಸ್ ಆಫ್ ಎನ್ನಲೇ ಬೇಕು. ಸಾಮಾನ್ಯ ಪ್ರೇಮ ಪ್ರಕರಣವನ್ನು ವಿಭಿನ್ನವಾಗಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮಾಮೂಲಿ ಪ್ರೇಮಕಥೆಯಾಗಿದ್ದರೂ, ಚಿತ್ರವನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ಅವರು. ಸಾಮಾನ್ಯವಾಗಿ ತ್ರಿಕೋಣ ಪ್ರೇಮಕತೆ ಆಗಿದ್ದರೂ, ಒಂದು ಭಿನ್ನತೆ ಚಿತ್ರದಲ್ಲಿದೆ.
IFM
ಚಿತ್ರದ ನಾಯಕ ರಾಹುಲ್‌ಗೆ ಮೂವರು ನಾಯಕಿಯರು. ತ್ಯಾಗರಾಜ್ ಛಾಯಾಗ್ರಹಣ ಚಿತ್ರದ ಪ್ಲಸ್ ಪಾಯಿಂಟ್. ಧರ್ಮ ಪ್ರಕಾಶ್ ಅವರ ಸಂಗೀತ ಗೆದ್ದಿದೆ. ಅವಿನಾಶ್ ಪೋಷಕ ಪಾತ್ರದಲ್ಲಿ ಹಾಸ್ಯದ ಝಲಕ್ ಮೂಲಕ ನಗಿಸಿದ್ದಾರೆ. ರಂಗಾಯಣ ರಘು ಸಹ ಪೋಷಕ ನಟರಾಗಿದ್ದು, ಚಿತ್ರದ ಇಂಟ್ರೊಡಕ್ಷನ್ ಅವರದ್ದೇ ಆಗಿದೆ.
ಸಾಫ್ಟ್‌ವೇರ್ ಜಗತ್ತಿನಲ್ಲಿ ಅರಳುವ ಪ್ರೀತಿಯನ್ನು ಇಲ್ಲಿನ ಚಿತ್ರದ ಕಥೆಯಾಗಿ ಬಳಸಿಕೊಳ್ಳಲಾಗಿದೆ. ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಜನರ ಮನಗೆದ್ದಿರುವ ಹರೀಶ್ ಈ ಚಿತ್ರದಲ್ಲಿ ನಗಿಸುವ ಪಾತ್ರದಲ್ಲಿ ಗೆದ್ದಿದ್ದಾರೆ. ವಂದನಾ ಗುಪ್ತಾ, ಮೋನಿಕಾ, ರೂಪಾಲಿ ನಾಯಕಿಯರಾಗಿ ಉತ್ತಮ ಅಭಿನಯ ನೀಡಿದ್ದಾರೆ. ಒಟ್ಟಾರೆ ಎಂದಿರನ್‌ಗೆ ಸವಾಲಾಗಿ ಬಿಡುಗಡೆ ಆಗಿರುವ ಚಿತ್ರ ಉತ್ತಮವಾಗಿ ಓಡುವ ಮೂಲಕ ಗೆಲುವಿನತ್ತ ಓಡುತ್ತಿದೆ ಅಂದರೆ ತಪ್ಪಾಗಲಾರದು.