ಅಪ್ಪು-ಪಪ್ಪು ಚಿತ್ರ ಗೆಲುವಿನ ಪಟ್ಟಿಗೆ ಸೇರಿದೆ. ಎರಡು ವಾರದ ನಂತರ ಚಿತ್ರದ ಬಗ್ಗೆ ಈ ರಿಸಲ್ಟ್ ಲಭಿಸಿದ್ದು ನಿರ್ಮಾಪಕರಲ್ಲಿ ಸಂತಸ ಮೂಡಿಸಿದೆ.
ಇತ್ತೀಚೆಗೆ ನಿರೀಕ್ಷೆ ಇಟ್ಟುಕೊಂಡ ಚಿತ್ರಗಳು ಸೋಲುತ್ತಿವೆ. ಅಂತಹ ಹೊತ್ತಿನಲ್ಲಿ ಮೊದಲ ವಾರ ಆದಾಯ ಗಳಿಸದೇ, ಎರಡನೇ ವಾರದ ನಂತರ ಗೆಲ್ಲುವ ಸ್ಲೋ ಇನ್‌ಕಮ್ ಜನರೇಟ್ ಮಾದರಿಯ ಚಿತ್ರಗಳ ಪಟ್ಟಿಗೆ ಇದೂ ಸೇರ್ಪಡೆ ಅಗಿದೆ.
ಶತದಿನ ಪೂರೈಸಿರುವ ಕೃಷ್ಣನ್ ಲವ್ ಸ್ಟೋರಿ, ಯೋಗರಾಜ್ ಭಟ್ಟರ ಪಂಚರಂಗಿ ಮಾದರಿಯಲ್ಲೇ ಈ ಚಿತ್ರವೂ ಹಿಟ್ ಆಗಿದೆ. ನಿಧಾನವಾಗಿಯಾದರೂ ಉತ್ತಮ ಆದಾಯ ತಂದುಕೊಡುತ್ತಿದೆ. ಚಿತ್ರದ ಗೆಲುವಿನಲ್ಲಿ ಬಾಲಕ ಸ್ನೇಹಿತ್ ಹಾಗೂ ಒರಂಗ್ಟಾನ್ ಚಿಂಪಾಂಜಿಯ ಅಭಿನಯವನ್ನು ಜನ ಒಪ್ಪಿಕೊಂಡಿದ್ದಾರೆ.
ಹಾಸ್ಯ ಜೋಡಿಯಾದ ರಾಜು ತಾಳಿಕೋಟೆ, ಕೋಮಲ್ ಅಭಿನಯ ಜನರ ಮನ ಗೆದ್ದಿದೆ. ಇದರ ಜತೆ ಒಂದಿಷ್ಟು ಗಂಭೀರ ಪಾತ್ರಗಳು, ವಿಲನ್ ಸೇರಿ ಚಿತ್ರ ಎಲ್ಲಾ ವರ್ಗದ ಜನರನ್ನೂ ಮೆಚ್ಚಿಸಿದೆ. ಶಾಲಾ ಮಕ್ಕಳನ್ನು ಅಪಾರವಾಗಿ ಸೆಳೆದಿರುವ ಈ ಚಿತ್ರ ದಸರಾ ಹಬ್ಬದ ರಜೆ ಸಂದರ್ಭದಲ್ಲಿ ಇನ್ನಷ್ಟು ಮಕ್ಕಳನ್ನು ಆಕರ್ಷಿಸುವಲ್ಲಿ ಸಂಶಯವೇ ಇಲ್ಲ.
ವಾರಾಂತ್ಯದಲ್ಲಿ ಮಕ್ಕಳ ದಂಡೇ ಈ ಚಿತ್ರಕ್ಕೆ ಪಾಲಕರೊಂದಿಗೆ ಆಗಮಿಸುತ್ತಿದ್ದು, ವಾರದ ಇತರೆ ದಿನಗಳಲ್ಲಿ ಉಳಿದ ಪ್ರೇಕ್ಷಕರಿಂದ ಚಿತ್ರಮಂದಿರ ತುಂಬುತ್ತಿದೆ. ಹಲವು ಮಂದಿ ಒರಂಗ್ಟಾನ್ ನೋಡಲೆಂದೇ ಬರುತ್ತಿರುವುದು ಇನ್ನೊಂದು ವಿಶೇಷ.
ಒಟ್ಟಾರೆ ನಿರೀಕ್ಷೆಗೂ ಮೀರಿದ ಚಿತ್ರ ಯಶಸ್ಸನ್ನು ಕಂಡಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಮಾದರಿಯ ಹತ್ತಾರು ಚಿತ್ರಗಳು ಬಂದರೆ ಅಚ್ಚರಿ ಇಲ್ಲ.