ಮೊನ್ನೆ ಇದ್ದಕ್ಕಿದ್ದಂತೆ ಹುಬ್ಬಳ್ಳಿಯಲ್ಲಿ ಬಾಂಬ್ ಸಿಡಿದಿದೆ. ಇದೇನು, ಮೊದಲೇ ಕೋಮು ದಳ್ಳುರಿಗೆ ಸಿಲುಕಿ ನಲುಗುವ ಪಟ್ಟಣದಲ್ಲಿ ಅಯೋಧ್ಯೆ ತೀರ್ಪು ಏನಾದರೂ ಇಷ್ಟೆಲ್ಲಾ ಆತಂಕ ತಂದಿಟ್ಟಿತಾ ಅಂತ ಗಾಬರಿ ಆಗಬೇಡಿ.
ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ 'ಕೋಟೆ' ಚಿತ್ರದಲ್ಲಿ ಈ ಒಂದು ಸಣ್ಣ ಅವಘಡ ಸಂಭವಿಸಿದೆ. ಚಿತ್ರದ ಹಾಡೊಂದರ ಚಿತ್ರೀಕರಣ ವೇಳೆ ಬಣ್ಣಗಳನ್ನು ಸಿಡಿಸುವ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಸಮೀಪ ಈ ಅವಘಡ ಘಟಿಸಿದೆ. ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಗುಲಾಲ್ ಸಿಡಿಸುವ ಸಂದರ್ಭದಲ್ಲಿ ಕೊಂಚ ಹೆಚ್ಚುಕಮ್ಮಿ ಆಗಿ ಈ ಇಬ್ಬರು ನಡೆದು ಹೋಗುತ್ತಿದ್ದ ಕಾಲೇಜು ವಿದ್ಯಾಥಿಗಳಿಗೆ ಗಾಯವಾಗಿದೆ. ಇದೇನು ಗಂಭೀರವಾದ ಸಮಸ್ಯೆ ಆಗಿಲ್ಲವಾದ್ದರಿಂದ ಚಿತ್ರೀಕರಣ ಸಾಂಗವಾಗಿ ಸಾಗಿದೆ. ಆರಂಭದಲ್ಲಿ ಕೊಂಚ ಗೊಂದಲ ಉಂಟಾದರೂ ಆ ನಂತರ ಎಲ್ಲಾ ಸರಿ ಹೋಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಸಿಡಿತದಿಂದ ಇವರಿಗೆ ತೊಂದರೆ ಆಗಿಲ್ಲ. ಬದಲು ಬಣ್ಣ ಸಿಡಿದ ಸಂದರ್ಭದಲ್ಲಿ ಅವರು ಹತ್ತಿರದಲ್ಲೇ ಇದ್ದುದರಿಂದ ಬಣ್ಣ ಮುಖಕ್ಕೆ ಮೆತ್ತಿಕೊಂಡು ಉಸಿರಾಡಲು ಕಷ್ಟವಾಗಿ ಅವರು ಎಚ್ಚರ ತಪ್ಪಿ ಬಿದ್ದರು. ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೂ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವ ಕೆಲಸವನ್ನು ಚಿತ್ರತಂಡ ಮಾಡಿದೆ.
ಒಟ್ಟಾರೆ ಚಿತ್ರದ ನಾಯಕ ಪ್ರಜ್ವಲ್, ನಿರ್ದೇಶಕ ಶ್ರೀನಿವಾಸ್ ರಾಜು ಹಾಗೂ ನಿರ್ಮಾಪಕ ಮಂಜುನಾಥ್ ಎಲ್ಲರೂ ಸ್ಥಳದಲ್ಲೇ ಇದ್ದು, ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದ್ದಾರೆ. ಮಕ್ಕಳ ಪಾಲಕರು ಚಿತ್ರ ತಂಡದ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು, ನಂತರ ಎಲ್ಲವೂ ರಾಜಿಯಾಗಿದೆ ಎಂದು ಮೂಲಗಳು ಹೇಳಿವೆ.