ಕನ್ನಡದ ಇತ್ತೀಚಿನ ಅತ್ಯಂತ ಗಂಭೀರ ಚಿತ್ರ ಎಂಬ ಹಣೆಪಟ್ಟಿಯೊಂದಿಗೆ ಬರುತ್ತಿರುವ ಚಿತ್ರ 'ವೀರ ಪರಂಪರೆ'. ಹಾಸ್ಯ, ಲವ್ವು, ಆಕ್ಷನ್ ಮೋಡಿ ಬೇಸತ್ತ ಅಭಿಮಾನಿಗಳಿಗೆ ಇದೊಂದು ಭಿನ್ನ ಚಿತ್ರವಾಗಿ ಲಭಿಸಲಿದೆ.
ನಿಧನರಾದರು ಎನ್ನುವ ಗಂಭೀರ ವದಂತಿಯಿಂದ ಇತ್ತೀಚೆಗೆ ಮತ್ತಷ್ಟು ಸುದ್ದಿಯಾಗಿರುವ ನಟ ಅಂಬರೀಷರನ್ನು ಜತೆಗೆ ಕಿಚ್ಚ-ಹುಚ್ಚದ ನಿರೀಕ್ಷೆಯಲ್ಲಿರುವ ಸುದೀಪ್ ಅವರನ್ನು ಒಳಗೊಂಡ ಈ ಚಿತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ ಎಸ್. ನಾರಾಯಣ್ ನಿರ್ಮಿಸುತ್ತಿದ್ದಾರೆ. ಚಿತ್ರಕತೆ, ಸಂಗೀತ ನಿರ್ದೇಶನ, ಕತೆ, ಸಂಭಾಷಣೆ ಎಲ್ಲವೂ ನಾರಾಯಣಮಯ.
ಇದೊಂದು ದೊಡ್ಡ ಪರಂಪರೆಯನ್ನು ಪ್ರತಿನಿಧಿಸುವ, ವಿವರ ನೀಡುವ ಹಾಗೂ ಪರಂಪರೆಯ ಆಚರಣೆಯನ್ನು ವಿವರಿಸುವ ಕತೆ. ಆಧುನಿಕ ಜಗತ್ತಿನ ಬದಲಾವಣೆಗಳ ನಡುವೆಯೂ ಕೌಟುಂಬಿಕ ಘನತೆ ಕಾಪಾಡಿಕೊಳ್ಳಲು ಸಾಧ್ಯ ಎನ್ನುವುದನ್ನು ತೋರಿಸುವ ಚಿತ್ರ. ಹಾಗಂತ ಪಾರಂಪರಿಕ ಕತೆಯನ್ನು ವಿವರಿಸುವ ಚಿತ್ರ ಇದಲ್ಲ. ಅಂಬರೀಷ್ ವರದೇ ಗೌಡ ಪಾತ್ರವೇ ಚಿತ್ರದ ಜೀವಾಳ. ಚಿತ್ರದುದ್ದಕ್ಕೂ ಗಂಭೀರ ವದನರಾಗಿ ಮನೆಯ ಯಜಮಾನನ ಪಾತ್ರ ನಿರ್ವಹಿಸಿದ್ದಾರೆ.
ಕನ್ನಡ ಚಿತ್ರರಂಗದ ಇಬ್ಬರು ಗಣ್ಯರನ್ನು ಹಾಕಿಕೊಂಡು ಚಿತ್ರ ಮಾಡುವ ಸಾಹಸಕ್ಕೆ ನಾರಾಯಣ್ ಮುಂದಾಗಿದ್ದು ಚಿತ್ರ ಮುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೇನಿದ್ದರೂ ಇವರ ಕೆಲಸವನ್ನು ಜನ ಮೆಚ್ಚಬೇಕಿದೆ ಅಷ್ಟೆ.