ರಾಮಸೇತು ಎಂಬ ಚಿತ್ರ ಕನ್ನಡದಲ್ಲಿ ಬರಲು ಸಜ್ಜಾಗುತ್ತಿದ್ದು, ಬಹುತೇಕ ಚಿತ್ರದ ಕೆಲಸ ಪೂರ್ಣಗೊಂಡಿದೆಯಂತೆ. ಇದೇನಿದು ರಾಮಾಯಣದಲ್ಲಿ ಬರುವ ರಾಮಸೇತುವಿನ ಕಥೆ ಚಿತ್ರವಾಗುತ್ತಿದೆಯೇ? ಬಹು ದಿನದ ನಂತರ ಒಂದು ಪೌರಾಣಿಕ ಚಿತ್ರ ನೋಡುವ ಅವಕಾಶ ಸಿಕ್ಕಿತು ಅಂತೆಲ್ಲಾ ಯೋಚಿಸಬೇಡಿ. ಈ ಚಿತ್ರಕ್ಕೂ ರಾಮಾಯಣದ ರಾಮಸೇತುವಿಗೂ ಎಳ್ಳಷ್ಟೂ ಸಂಬಂಧವಿಲ್ಲ.
ವ್ಯಕ್ತಿಯೊಬ್ಬ ತನ್ನ ಆತ್ಮೀಯ ಸ್ನೇಹಿತನನ್ನು ರಾಜಕಾರಣಿ ಒಬ್ಬ ಸಾಯಿಸಿ ಬಿಟ್ಟಾಗ, ಆ ರಾಜಕಾರಣಿ ವಿರುದ್ಧ ಸೇಡು ತೀರಿಸಿಕೊಳ್ಳುವ ಮೂಲಕ ಸ್ನೇಹಿತನ ಆತ್ಮಕ್ಕೆ ಶಾಂತಿ ಕೋರುವ ಒಂದು ವಿಭಿನ್ನ ದೃಶ್ಯಾವಳಿ ಒಳಗೊಂಡ ಚಿತ್ರವಂತೆ. ಇಲ್ಲಿ ಸ್ನೇಹಿತರ ನಡುವಿನ ಆತ್ಮೀಯತೆ, ರಾಜಕಾರಣದ ದರ್ಪ, ಸೇಡಿನ ಜ್ವಾಲೆ ಹಾಗೂ ಒಂದಿಷ್ಟು ಸಾರಯುತ ಕಥೆಯನ್ನು ಚಿತ್ರ ಒಳಗೊಂಡಿದೆಯಂತೆ. ಚಿತ್ರಕ್ಕೆ ಎ.ಪಿ. ಅಣ್ಣಯ್ಯ ಅವರ ನಿರ್ದೇಶನ ಸಿಕ್ಕಿದ್ದು, ಶ್ರೀದೇವಿ ರಾಮರೆಡ್ಡಿ ಎಂಬ ನಿರ್ಮಾಪಕರು ಹಣ ಹೂಡಿದ್ದಾರೆ.
ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದಿದ್ದು, ಮುಂದಿನ ಕಾರ್ಯ ಪ್ರಗತಿಯಲ್ಲಿದೆ. ಒಟ್ಟಾರೆ ಚಿತ್ರ ಯುವ ಪೀಳಿಗೆಯಲ್ಲಿ ಸ್ನೇಹದ ಪಾಠ ಹೇಳಲು ಬರುತ್ತಿದೆ. ಇಬ್ಬರು ಆತ್ಮೀಯ ಸ್ನೇಹಿತರು ತಮ್ಮ ಸ್ನೇಹಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎನ್ನುವುದನ್ನು ತೋರಿಸುತ್ತದೆ. ಆದರೆ ಅನೀರೀಕ್ಷಿತವಾಗಿ ರಾಜಕಾರಣಿಯಿಂದ ಸಾವೀಗೀಡಾಗುವ ಸ್ನೇಹಿತನಿಗಾಗಿ ಮತ್ತೊಬ್ಬ ತನ್ನ ಜೀವನದ ಸುಖವನ್ನೇ ತ್ಯಾಗಮಾಡಿ ಸೇಡನ್ನು ತೀರಿಸಿಕೊಳ್ಳುತ್ತಾನೆ ಎನ್ನುವುದು ಚಿತ್ರದಲ್ಲಿದೆ.
ಚಿತ್ರದ ಚಿತ್ರೀಕರಣವನ್ನು ಮಂಗಳೂರು, ಮೈಸೂರು, ಉಡುಪಿ, ಶ್ರೀರಂಗಪಟ್ಟಣ, ಮತ್ತಿತರ ಕಡೆಗಳಲ್ಲಿ ಮಾಡಲಾಗಿದೆ. ಒಟ್ಟಾರೆ ಚಿತ್ರದ ಬಿಡುಗಡೆಯೂ ಅತ್ಯಂತ ಸನಿಹದಲ್ಲಿದ್ದು, ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.