ಸುದೀಪ್ ಪಾಲಿಗೆ ವೀರ ಪರಂಪರೆ ಒಂದು ಬ್ರೇಕ್ ನೀಡುವ ಚಿತ್ರವಾಗಲಿದೆಯಾ? ಹೌದು ಎನ್ನುತ್ತಿದೆ ಗಾಂಧಿನಗರ. ಇವರ ಇತ್ತೀಚಿನ ಪ್ರಯತ್ನಗಳಲ್ಲಿ ಈ ಚಿತ್ರಕ್ಕಾಗಿ ಮಾಡಿದ ಯತ್ನ ಬಹು ದೊಡ್ಡದಂತೆ. ಎಂಟೆದೆಯ ಬಂಟನಾಗಿ ಇವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವೀರ ಪರಂಪರೆಯ ಘನತೆಯನ್ನು ಎತ್ತಿ ಹಿಡಿಯುವ ವಿಶಿಷ್ಟ ಪಾತ್ರ ಇವರದ್ದು. ಅದರಲ್ಲೂ ತಂದೆಯ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಇರುವಾಗ ಅವರ ಮಗನಾಗಿ ಇವರು ಸಾಧಾರಣ ಅಭಿನಯ ನೀಡಿದರೆ ಸರಿ ಎನಿಸುತ್ತದೆಯೇ? ಇದರಿಂದ ಸುದೀಪ್ ತಮ್ಮೆಲ್ಲಾ ಶ್ರಮ, ಜಾಣ್ಮೆ ತೊಡಗಿಸಿ ಈ ಚಿತ್ರದಲ್ಲಿ ನಟಿಸಿದ್ದಾರಂತೆ.
ಭರ್ಜರಿ ಕಲಾವಿದರು ಹಾಗೂ ಭರ್ಜರಿ ಟೈಟಲ್ ಇರುವ ಚಿತ್ರ ಇದಾಗಿದೆ. ಇದರಿಂದ ಇಲ್ಲಿ ಪ್ರತಿಯೊಬ್ಬರ ಪಾತ್ರವೂ ವಿಭಿನ್ನ. ಅಚ್ಚರಿ ಮೂಡಿಸುವ ರೀತಿ ಪ್ರತಿಯೊಬ್ಬರಿಂದ ಅಭಿನಯ ತೆಗೆಸುವ ಕಾರ್ಯವನ್ನು ನಿರ್ದೇಶಕ ಹಾಗೂ ನಿರ್ಮಾಪಕ ಎಸ್. ನಾರಾಯಣ್ ಮಾಡಿದ್ದಾರೆ. ಬಹು ದಿನದ ನಂತರದ ಒಂದು ವಿಶಿಷ್ಟ ಚಿತ್ರಕ್ಕೆ ಉತ್ತಮ ಬೆಲೆ ನಿರೀಕ್ಷಿಸಲಾಗುತ್ತಿದೆ.
ಒಂದೆಡೆ ಸುದೀಪ್ ಮನೆಯ ಮರ್ಯಾದೆ ಕಾಪಾಡುವ ಎಂಟೆದೆ ಬಂಟನಾದರೆ, ಇನ್ನೊಂದೆಡೆ ಐಂದ್ರಿತಾ ರೇ ಜತೆ ಲವ್ವು ಡವ್ವಿನಲ್ಲೂ ಕಾಣಿಸಿಕೊಳ್ಳುತ್ತಾರೆ. ಎರಡೂ ಕಡೆ ವಿಭಿನ್ನ ಮುಖಚರ್ಯೆ. ನಿಜಕ್ಕೂ ಇಂಥ ಪಾತ್ರ ಸುದೀಪ್ ಅವರಿಗೆ ಮಾತ್ರ ಸೂಟ್ ಅಗುತ್ತೆ ಅನ್ನುವಂತೆ ಮೂಡಿ ಬಂದಿದೆಯಂತೆ ಚಿತ್ರ.
'ಗಾಳಿಯಲ್ಲಿ ತೇಲಿ ಹೋದೆ ನಾನು ಈ ದಿನ' ಹಾಡು ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಒಟ್ಟಾರೆ ಚಿತ್ರದ ಬಿಡುಗಡೆ ಅತ್ಯಂತ ಸನಿಹದಲ್ಲಿದ್ದು ಜನರಲ್ಲಿ ಒಂದು ಹೊಸ ನಿರೀಕ್ಷೆ ಮೂಡಿಸಿದೆ.