ನಮ್ಮ ಪ್ರೇಮ ಚಂದ್ರಮ ಬ್ಯಾಂಕಾಕ್ನಲ್ಲಿ ಬೆಳಗುತ್ತಿದ್ದಾನೆ. ಹೌದು, ಪ್ರೇಮ ಚಂದ್ರಮ ಚಿತ್ರದ ಶೂಟಿಂಗ್ ಸದ್ಯ ಬ್ಯಾಂಕಾಕಿನಲ್ಲಿ ನಡೆದಿದ್ದು, ಇಡೀ ಚಿತ್ರತಂಡ ಅಲ್ಲಿ ಬೀಡು ಬಿಟ್ಟಿದೆ. ನಾಲ್ವರು ನಿರ್ಮಾಪಕರಾದ ಸುನಿಲ್ ಕುಮಾರ್ ಶಿಂಧೆ, ಯು.ಇ. ಗಣೇಶ್, ಜಿ. ಕುಮಾರ್, ಜಿ.ಎಸ್. ಜಗದೀಶ್ ಅವರ ಪ್ರಯತ್ನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಮೂರು ಹಾಡುಗಳು ಬ್ಯಾಂಕಾಕ್ ನಗರದಲ್ಲಿ ಶೂಟಿಂಗ್ ನಡೆಸಲಿವೆ. ಹತ್ತು ದಿನಗಳ ಕಾಲ ನಿರಂತರ ಚಿತ್ರೀಕರಣ ಇಲ್ಲಿ ನಡೆಯಲಿದೆ.
ಇಲ್ಲಿ ಚಿತ್ರೀಕರಣ ಹಾಡುಗಳೆಂದರೆ ವಿ. ನಾಗೇಂದ್ರಪ್ರಸಾದ್ ರಚನೆಯ 'ಕೈಗಳು ಒಂದಾದವು ಇಂದು ಕಣ್ಗಳು ಒಂದಾದವು ಇಂದು...' ಹಾಗೂ 'ಒಮ್ಮೊಮ್ಮೆ ಏಕೋ ಏನೋ ನನಗೇಕೋ ಸಂದೇಹ' ಮತ್ತು ಯೋಗರಾಜ್ ಭಟ್ಟರ ರಚನೆಯ 'ರಸ್ತೆಯಲ್ಲಿ ಇಬ್ಬರಿಗೂ ಏನೋ ಒಂದು ಶುರುವಾಯ್ತು' ಹಾಡುಗಳು ಇಲ್ಲಿ ಚಿತ್ರೀಕರಣಗೊಳ್ಳಲಿವೆ. ಈ ಹಾಡಿಗೆ ರಘು ಮುಖರ್ಜಿ, ಕಿರಣ್ ಹಾಗೂ ರೇಖಾ ಹೆಜ್ಜೆ ಹಾಕಲಿದ್ದಾರೆ.
ಈ ಎಲ್ಲಾ ಹಾಡಿಗೆ ತ್ರಿಭುವನ್ ನೃತ್ಯ ನಿರ್ದೇಶನ ನೀಡಿದ್ದಾರೆ. ಚಿತ್ರವನ್ನು ಶಾಹುರಾಜ್ ಶಿಂಧೆ ನಿರ್ದೇಶಿಸಿದ್ದಾರೆ. ವಿ. ಹರಿಕೃಷ್ಣರ ಸಂಗೀತ ಚಿತ್ರಕ್ಕೆ ಸಿಕ್ಕಿದೆ. ಎಚ್.ಸಿ. ವೇಣು ಛಾಯಾಗ್ರಾಹಕರಾಗಿದ್ದು, ಶಶಿಧರ್ ಭಟ್ ಅವರ ಸಂಭಾಷಣೆ ಮತ್ತು ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ರವಿವರ್ಮರ ಸಾಹಸವೂ ಇರುವುದು ವಿಶೇಷ.