ಲವ್ಗುರು ನಂತರ ಇದೀಗ ಅದೇ ತಂಡದ ಗಾನಾ ಬಜಾನಾ ತೆರೆಗೆ ಬರುತ್ತಿದೆ. ತರುಣ್ ರಾಧಿಕಾ ಪಂಡಿತ್, ದಿಲೀಪ್ ರಾಜ್ ಜೋಡಿಯ ಈ ಚಿತ್ರದಲ್ಲಿ ಬಹುತೇಕ ಅದೇ ಲವ್‌ಗುರು ಚಿತ್ರತಂಡವಿದೆ. ನಿರ್ದೇಶನ, ನಿರ್ಮಾಣ ಯಾವುದೂ ಬದಲಾಗಿಲ್ಲ. ಹಾಗಾಗಿ ಚಿತ್ರತಂಡ ತಮ್ಮ ಲವ್‌ಗುರು ಪ್ರಯತ್ನದಿಂದ ಉಬ್ಬಿಹೋಗಿದ್ದು, ಈ ಚಿತ್ರದ ಮೂಲಕ ಮತ್ತಷ್ಟು ಆತ್ಮವಿಶ್ವಾಸದಿಂದ ಇದೀಗ ಪ್ರೇಕ್ಷಕರೆದುರು ಮತ್ತೆ ಹಾಜರಾಗಲಿದ್ದಾರೆ.
ಇದು ಲವ್‌ಗುರು ಚಿತ್ರದ ನಂತರ ಇನ್ನೊಂದು ಚಿತ್ರಕ್ಕೆ ಅದೇ ತಂಡಕಟ್ಟಿಕೊಂಡು ಗಾನಾ ಬಜಾನಾ ನಿರ್ಮಿಸಿರುವ ನಿರ್ಮಾಪಕ ನವೀನ್ ಹಾಗೂ ಚಿತ್ರದ ನಾಯಕ ನಟ ತರುಣ್ ಅವರ ಅಭಿಪ್ರಾಯ. ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಕುರಿತು ಈ ಎರಡು ಮುಖ್ಯಪಾತ್ರಧಾರಿಗಳು ಹೇಳಿದ್ದು ಇಲ್ಲಿದೆ.
ಲವ್‌ಗುರು ಚಿತ್ರ ನಿರ್ಮಾಣ ಸಂದರ್ಭದಲ್ಲಿ ನನಗೇನೂ ಗೊತ್ತಿರಲಿಲ್ಲ. ಚಿತ್ರರಂಗ ನನ್ನ ಪಾಲಿಗೆ ಹೊಸದಾಗಿತ್ತು. ಆದರೆ ಈಗ ಸಾಕಷ್ಟು ಕಲಿತಿದ್ದೇನೆ. ಅದನ್ನು ಗಾನಾ ಬಜಾನಾದಲ್ಲಿ ಪ್ರದರ್ಶಿಸಿದ್ದೇನೆ. ಈ ಚಿತ್ರ ಖಂಡಿತಾ ಗೆಲ್ಲುತ್ತೆ. ಚಿತ್ರ ಎಲ್ಲೂ ಅವ್ಯವಸ್ಥಿತ ಅನ್ನುವ ರೀತಿ ಮೂಡಿ ಬಂದಿಲ್ಲ. ಲವ್‌ಗುರು ಚಿತ್ರ ಮಾಡುವಾಗ ಭಯ ಇರಲಿಲ್ಲ. ಆದರೆ ಈಗ ಇದೆ. ಲವ್‌ಗುರು ಗೆದ್ದ ಚಿತ್ರವಾಗಿದ್ದು, ಜನ ಇದೀಗ ನಮ್ಮದೇ ತಂಡದ ಈ ಗಾನಾ ಬಜಾನಾ ಚಿತ್ರದ ಮೇಲೆ ಬಹಳ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಜನರ ನಿರೀಕ್ಷೆ ಹುಸಿಗೊಳ್ಳದ ರೀತಿ ನಿರ್ಮಿಸಿದ್ದೇನೆ ಎನ್ನುವ ಭಾವನೆ ನನ್ನದು ಎನ್ನುತ್ತಾರೆ ನವೀನ್.
ಇನ್ನು ನಾಯಕ ತರುಣ್ ಮಾತಿಗೆ ಇಳಿದಾಗ, ಚಿತ್ರದಲ್ಲಿ ನಾನು ಡಾನ್ಸ್ ಲವರ್ ಪಾತ್ರದಲ್ಲಿ ಮಿಂಚಿದ್ದೇನೆ. ಕ್ರಿಶ್ ಎಂಬ ಹೆಸರು ನನ್ನದು. ಸ್ಟೈಲಿಶ್ ಪಾತ್ರ ಇದಾಗಿದ್ದು, ರಂಜಿಸಲು ಸಾಕಷ್ಟು ಅವಕಾಶ ನೀಡಲಾಗಿದೆ. ಚಿತ್ರಕ್ಕಾಗಿ, ನಟನೆಗಾಗಿ ಸಾಕಷ್ಟು ಹೋಂವರ್ಕ್ ಮಾಡಿಕೊಂಡಿದ್ದೇನೆ. ನನ್ನ ಪಾತ್ರ ಎಲ್ಲೂ ಬೋರ್ ಹೊಡೆಸಲ್ಲ. ಶರೀರದ ಪ್ರತಿ ಅಂಗಾಗಗಳ ಚಲನೆಯ ಬಗ್ಗೆಯೂ ಗಮನ ಹರಿಸಿದ್ದೇನೆ. ಇದು ತೆರೆಗೆ ಬಂದ ನಂತರ ಇದು ಜನರಿಗೆ ಅರಿವಾಗಲಿದೆ. ನಿಜಕ್ಕೂ ನನ್ನ ಪ್ರಯತ್ನಕ್ಕೆ ಜನ ಬೆನ್ನುತಟ್ಟುತ್ತಾರೆ ಎನ್ನುವ ವಿಶ್ವಾಸ ಇದೆ ಎನ್ನುತ್ತಾರೆ.
ಒಂದರ ಮೇಲೊಂದು ಚಿತ್ರಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಭರವಸೆಯ ನಟಿ ರಾಧಿಕಾ ಪಂಡಿತ್ ಪಾಲಿಗೂ ಇದು ಮತ್ತೆ ಅದೃಷ್ಟ ತಂದುಕೊಡುವುದೋ ಎಂದು ಕಾದು ನೋಡಬೇಕು.