ಕೃಷ್ಣನ್ ಲವ್ ಸ್ಟೋರಿಯ ಯಶಸ್ಸಿನ ಅಲೆಯಲ್ಲಿ ಬೀಗುತ್ತಿರುವ ಅಜಯ್ ರಾವ್ ಇದೀಗ ಕೃಷ್ಣನ್ ಮ್ಯಾರೇಜ್ ಸ್ಟೋರಿಯಲ್ಲೂ ನಾಯಕನಾಗಲು ಹೊರಟ ಕಥೆ ಗೊತ್ತೇ ಇದೆ. ಕೃಷ್ಣನ್ ಮ್ಯಾರೇಜ್ ಸ್ಟೋರಿ ಅಂದಾಗ ಹಲವರಿಗೆ ಅಜಯ್ ರಾವ್ ಮದುವೆಯಾಗ್ತಿದಾರಾ ಅಂತ ಕನ್‌ಫ್ಯೂಸ್ ಆಗಿದ್ದೂ ನಿಜ. ಆದರೆ ಅಜಯ್ ಇದೀಗ ಕೃಷ್ಣನ್ ಮ್ಯಾರೇಜ್ ಸ್ಟೋರಿ ಜೊತೆಜೊತೆಗೆ ತಾನೂ ವೈವಾಹಿಕ ಜೀವನಕ್ಕೆ ಕಾಲಿಡಲು ಚಿಂತನೆ ನಡೆಸಿದ್ದಾರೆ. ಜೊತೆಗೆ ಪ್ರಯತ್ನವೂ ಸಾಗಿದೆ!
ಹೌದು. ಅಜಯ್ ರಾವ್ ಇದೀಗ ಸದ್ಯಕ್ಕೆ ಎರಡು ಭವಿಷ್ಯದ ಕನಸುಗಳನ್ನು ಹೊತ್ತು ಅವುಗಳನ್ನು ಸಾಕಾರಗೊಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅದರಲ್ಲಿ ಒಂದು ಮದುವೆಯಾಗುವುದು, ಮತ್ತೊಂದು ಚಿತ್ರ ನಿರ್ದೇಶನ ಮಾಡುವುದು.
ಮದುವೆಯಂತೂ ಈ ವರ್ಷದಲ್ಲೇ ನಡೆಯಬೇಕೆಂದು ಅಜಯ್ ಅಂದುಕೊಂಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಅವರ ಪ್ರಯತ್ನವೂ ಸಾಗಿದೆಯಂತೆ. ಕೃಷ್ಣನ್ ಮ್ಯಾರೇಜ್ ಸ್ಟೋರಿ ಚಿತ್ರ ಕಂಪ್ಲೀಟ್ ಆಗುವ ಮೊದಲೇ ತನಗೆ ಸೂಕ್ತ ವಧು ಹುಡುಕಿ ಮದುವೆಯಾಗೋ ಹಂಬಲ ಅವರದ್ದು. ಇನ್ನು ನಿರ್ದೇಶನದ ವಿಷಯಕ್ಕೆ ಬಂದರೆ, ಮುಂದಿನ ವರ್ಷಗಳಲ್ಲಿ ನಿರ್ದೇಶನಕ್ಕೂ ಇಳಿಯುವ ಯೋಜನೆಯಿದೆ. ಆದರೆ ಮದುವೆಯಾಗುವಷ್ಟು ತರಾತುರಿಯ ಕೆಲಸವಲ್ಲವದು. ಅದಕ್ಕೆ ಸಾಕಷ್ಟು ತಯಾರಿ ನಡೆಸಿಯೇ ಇಳಿಯುವ ಚಿಂತನೆ ನಡೆಸಿದ್ದಾರಂತೆ ಅಜಯ್.
ಎಕ್ಸ್‌ಕ್ಯೂಸ್‌ಮಿ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅಜಯ್ ರಾವ್ ಎಂಬ ಸುಂದರ ಯುವಕ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಎಕ್ಸ್‌ಕ್ಯೂಸ್‌ಮಿಯಲ್ಲಿ ರಮ್ಯ ಜೊತೆಗೆ ಡ್ಯುಯೆಟ್ ಹಾಡಿ ಗೆದ್ದ ನಂತರ ಅಂಥ ಹೇಳಿಕೊಳ್ಳುವಂಥ ಚಿತ್ರಗಳನ್ನು ನೀಡದಿದ್ದರೂ, ತಾಜ್ ಮಹಲ್ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮರುಜನ್ಮ ಪಡೆದರು. ಮತ್ತೆ ಪ್ರೇಮ್ ಕಹಾನಿ ಸೋತರೂ, ಪುನಃ ಇದೀಗ ಕೃಷ್ಣನ್ ಲವ್ ಸ್ಟೋರಿ ಕೈಹಿಡಿದಿದೆ. ಒಟ್ಟಾರೆ, ಸಾಕಷ್ಟು ಸಾರಿ ಬಿದ್ದರೂ, ಅದೃಷ್ಟ ಎಂಬುದು ಅಜಯ್ ಜೊತೆಗಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆ. ಅಜಯ್ ಅವರ ಭವಿಷ್ಯದ ಕನಸುಗಳು ನನಸಾಗಲಿ. ಜೊತೆಗಾತಿ ಜೊತೆಗೂಡಲಿ ಎಂದೇ ಹಾರೈಸೋಣ.