ತಮಿಳಿನ ಸೂಪರ್ ಹಿಟ್ 'ಸಿಂಗಂ' ಕನ್ನಡದಲ್ಲಿ 'ಕೆಂಪೇಗೌಡ'ನಾಗುತ್ತಿರುವುದು ಗೊತ್ತಿರುವ ವಿಚಾರವೇ. ಇಲ್ಲಿ ಸುದೀಪ್‌ರದ್ದು ನಾಯಕ ಮತ್ತು ನಿರ್ದೇಶಕನ ಪಾತ್ರ. ಅವೆರಡನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ಎಲ್ಲಿಯವರೆಗೆ ಎಂದರೆ, ರಿಮೇಕ್ ಚಿತ್ರವಾದರೂ, ಸ್ವಮೇಕ್ ಚಿತ್ರದಂತೆ ಮಾಡಿದ್ದಾರೆ ಎಂಬಷ್ಟರ ಮಟ್ಟಿಗೆ.
ಇತ್ತೀಚೆಗಷ್ಟೇ 'ಕೆಂಪೇಗೌಡ'ದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ನಟ ಅಶೋಕ್, ಕಳೆದ ಐದು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದೆ. ಸುದೀಪ್ ಕರೆದಾಗ ಇಲ್ಲವೆನ್ನಲಾಗಲಿಲ್ಲ. ರಿಮೇಕ್ ಸಿನೆಮಾ ಆದರೂ ಒಪ್ಪಿದ್ದೆ. ತುಂಬಾ ಎಫೆಕ್ಟಿವ್ ಆಗಿರುವ ಕಥೆಯಿದೆ. ರಿಮೇಕ್ ಚಿತ್ರವನ್ನೂ ಸ್ವಮೇಕ್ ಚಿತ್ರದ ತರಹ ತೆಗೆದಿದ್ದಾರೆ ಎಂದು ಹೇಳಿಕೊಂಡರು.
ಧೀರ ಪೊಲೀಸ್ ಅಧಿಕಾರಿಯೊಬ್ಬರ ಅದ್ವಿತೀಯ ಸಾಹಸ ಕಥೆಯನ್ನು ಚಿತ್ರ ಹೊಂದಿದೆ.
ನಾಯಕಿ ರಾಗಿಣಿ ದ್ವಿವೇದಿಯವರು ಸುದೀಪ್ ಜತೆ ಅಭಿನಯಿಸುತ್ತಿರುವ ಎರಡನೇ ಚಿತ್ರವಿದು. 'ವೀರ ಮದಕರಿ' ಚಿತ್ರದಿಂದ ನಾನು ಕನ್ನಡದಲ್ಲಿ ಗುರುತಿಸಿಕೊಂಡರೆ 'ಕೆಂಪೇಗೌಡ' ಇನ್ನೂ ದೊಡ್ಡ ಹೆಸರು ತಂದು ಕೊಡಲಿದೆ ಎಂಬ ವಿಶ್ವಾಸವನ್ನು ರಾಗಿಣಿ ವ್ಯಕ್ತಪಡಿಸಿದರು.
ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಜ್ಯ ಗೃಹ ಸಚಿವ ಅಶೋಕ್, ಕೆಂಪೇಗೌಡ ಎಂಬ ಹೆಸರೇ ಸಂಚಲನ ಉಂಟು ಮಾಡುತ್ತದೆ. ಒಬ್ಬ ಪೊಲೀಸ್ ಅಧಿಕಾರಿ ಸಮರ್ಥವಾಗಿ ಕೆಲಸ ಮಾಡುವಂಥ ನಾಯಕನ ಪಾತ್ರ ಸುದೀಪ್ ಅವರದು. ನಾನು ಮತ್ತು ಸುದೀಪ್ ಈ ಚಿತ್ರದ ಬಗ್ಗೆ ಬಹಳಷ್ಟು ಮಾತಾಡಿದ್ದೆವು. ಈ ಚಿತ್ರದಲ್ಲಿ ಗೃಹ ಮಂತ್ರಿಯಾಗಿ ನಾನು ಅಭಿನಯಿಸ ಬೇಕಿತ್ತು. ಆದರೆ ಮಾತಾಡಿಕೊಂಡ ಕೆಲವೇ ದಿನಗಳಲ್ಲಿ ನಾನು ಗೃಹಮಂತ್ರಿಯಾದ್ದರಿಂದ ನಟಿಸಲು ಸಾಧ್ಯವಾಗಲಿಲ್ಲ. ಇತಿಹಾಸ ಪ್ರಸಿದ್ಧ ಕೆಂಪೇಗೌಡರ ಹಾಗೆ ಈ ಚಿತ್ರ ಕೂಡಾ ಪ್ರಸಿದ್ಧವಾಗಲಿ ಎಂದು ಹಾರೈಸಿದರು.
ಈ ಚಿತ್ರಕ್ಕಾಗಿ ಸುದೀಪ್ ಗುಜರಾತಿನಲ್ಲಿ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ ಎಂದು ನಿರ್ಮಾಪಕ ಶಂಕರೇಗೌಡ ಹೇಳಿದರು. ಇದುವರೆಗೆ ನಾನು ಮಾಡಿದ ಎಲ್ಲ ಸಿನೆಮಾಗಳಿಗಿಂತ ಹೆಚ್ಚು ಕಷ್ಟಪಟ್ಟು ತಯಾರಿಸಿದ ಚಿತ್ರವಿದು ಎಂದು ನಾಯಕ ನಟ, ನಿರ್ದೇಶಕ ಸುದೀಪ್ ತಿಳಿಸಿದರು.