ರೇಸ್ ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿ ಒಂದು ಹಳೆಯ ಕಟ್ಟಡ ಅನ್ನುವುದು ಎಲ್ಲರಿಗೂ ಗೊತ್ತು. ಇಲ್ಲಿ ಪೊಲೀಸರು ಸದಾ ಕಾಣುವುದು ಸಾಮಾನ್ಯ. ಆದರೆ ಇದು ಈಗ ಪೊಲೀಸ್ ಠಾಣೆಯಾಗಿದೆ.
ಇದೇನು ದೇವೇಗೌಡರೇನಾದ್ರೂ ತಮ್ಮ ಜೆಡಿಎಸ್ ಕಚೇರಿಯನ್ನು ಇಷ್ಟು ಸುಲಭವಾಗಿ ಪೋಲೀಶ್ ಠಾಣೆಯಾಗಲು ಬಿಟ್ಟುಕೊಟ್ಟರಾ ಅಂದರೆ ತಪ್ಪಾಗುತ್ತದೆ. ಇದು ಚಿತ್ರದ ಚಿತ್ರೀಕರಣಕ್ಕಾಗಿ ಹಾಕಿದ್ದ ತಾತ್ಕಾಲಿಕ ಸೆಟ್. ಕಳೆದ ಸೋಮವಾರ ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ಪಕ್ಷದ ಕಾರ್ಯಕರ್ತರಿಗೆ ಪರಮಾಶ್ಚರ್ಯ. ಮಾಗಡಿ ರಸ್ತೆ ಪೊಲೀಸ್ ಠಾಣೆ ಎಂಬ ಫಲಕ ಅಲ್ಲಿ ರಾರಾಜಿಸುತ್ತಿತ್ತು. ವಿಚಾರಿಸಿದಾಗ ಅರಿವಾದದ್ದು ಅದು ಕೆಂಪೇಗೌಡ ಚಿತ್ರದ ಚಿತ್ರೀಕರಣಕ್ಕಾಗಿ ಹಾಕಿದ್ದ ಸೆಟ್ ಎಂದು.
ನಟ ಸುದೀಪ್ ಅಭಿನಯದ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ ಇದು. ಹತ್ತಾರು ಪೊಲೀಸರ ಓಡಾಟ, ಬೂಟು ಕಾಲಿನ ಸದ್ದು, ಪೊಲೀಸ್ ವಾಹನದ ಓಡಾಟದಿಂದ ಗಿಜಿಗುಡುತ್ತಿತ್ತು. ಗುಲ್ಬರ್ಗ ಹಾಗೂ ಕಡೂರಿನ ಚುನಾವಣೆ ಬಿಸಿಯಿಂದಾಗಿ ಹೇಗೂ ಪಕ್ಷದ ಕಚೇರಿ ಖಾಲಿ ಹೊಡೆಯುತ್ತಿತ್ತು. ಇದೇ ಅವಕಾಶವನ್ನು ಬಳಸಿಕೊಂಡ ಚಿತ್ರತಂಡ ಇದನ್ನು ಕೆಲ ದಿನಕ್ಕೆ ಶೂಟಿಂಗ್‌ಗಾಗಿ ಬಳಸಿಕೊಂಡಿತು.
ಒಟ್ಟಾರೆ ಅತ್ತ ಸಾಗಿದವರಿಗೆಲ್ಲಾ ಇದೊಂದು ಠಾಣೆಯಾಗಿ ಗೋಚರಿಸಿದ್ದು ಸುಳ್ಳಲ್ಲ. ಒಂದೆಡೆ ಚುನಾವಣೆ ಗಡಿಬಿಡಿಯಲ್ಲಿ ಕಾರ್ಯಕರ್ತರಿದ್ದು, ಏಕಾಏಕಿ ಪಕ್ಷದ ಕಚೇರಿಯೂ ಹೀಗೆ ಗೋಚರಿಸಿದ್ದು ಎಲ್ಲರಲ್ಲೂ ಗೊಂದಲ ಮೂಡಿಸಿತ್ತು.