ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುದೀಪ್‌ಗೆ ಭಾವನಾ ಕೈಕೊಟ್ಟರೆ ಉಪೇಂದ್ರನ ಕಥೆಯೇನು...? (Sudeep | Bhavana | Upendra | Kempe Gowda)
WD
ಇತ್ತೀಚೆಗಷ್ಟೇ ನಟನೊಬ್ಬನನ್ನು ಪ್ರೀತಿಸುತ್ತಿದ್ದೇನೆಂದು ಹೇಳಿ ಸುದ್ದಿಯಾಗಿದ್ದ 'ಜಾಕಿ' ಹುಡುಗಿ ಮಲಯಾಳಿ ಚೆಲುವೆ ಭಾವನಾ, ಕಿಚ್ಚ ಸುದೀಪ್‌ ಅವರ ನೂತನ ಚಿತ್ರದಲ್ಲಿ ನಟಿಸಲಿದ್ದಾರೆ. ಜತೆಗೆ ಉಪೇಂದ್ರರ ಮುಂದಿನ ಚಿತ್ರದಲ್ಲೂ ಭಾವನಾಳೇ ಹೀರೋಯಿನ್ ಎಂದೆಲ್ಲ ಸುದ್ದಿಯಾಗುತ್ತಾ ಇದ್ದರೂ, ಭಾವನಾ ಮಾತ್ರ ಸದ್ಯಕ್ಕೆ ಮಲಯಾಳ ಚಿತ್ರವೊಂದರಲ್ಲಿ ಬ್ಯುಸಿಯಾಗಿರುವಂತಿದೆ.

ಇನ್ನೊಂದೆಡೆ ತನ್ನ ನೂತನ ಚಿತ್ರಕ್ಕೆ ಭಾವನಾಳೇ ಬೇಕೆಂದಿರುವ ಸುದೀಪ್, ತಡವಾದರೂ ಪರವಾಗಿಲ್ಲ ಕಾಯುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಬಲ್ಲಮೂಲಗಳ ಪ್ರಕಾರ ವಿಷಯ ಇಷ್ಟೆ.. ಸುದೀಪ್ ಅವರ ಮುಂದಿನ ಚಿತ್ರ 'ವಿಷ್ಣು ವರ್ಧನ' ಕ್ಕೆ ಭಾವನಾ ಕಳೆದ ಡಿಸಂಬರ್‌ನಲ್ಲೇ ಕಾಲ್‌ಶೀಟ್ ಕೊಟ್ಟಿದ್ದರು, ಆದರೆ ಸುದೀಪ್ 'ಕೆಂಪೇಗೌಡ' ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ, ಪ್ರಿಯದರ್ಶನ್ ನಿರ್ದೇಶನದ 'ಅರಬಿಯುಂ ಒಟ್ಟಗವುಂ ಪಿ ಮಾಧವನ್ ನಾಯರುಂ' ಎಂಬ ಮಲೆಯಾಳಂ ಚಿತ್ರವೊಂದಕ್ಕೆ ಭಾವನಾ ಸಹಿ ಹಾಕಿದ್ದಾರೆ. ಮೋಹನ್ ಲಾಲ್ ನಾಯಕನಾಗಿರುವ ಈ ಚಿತ್ರದ ಚಿತ್ರೀಕರಣ ಅಬುಧಾಬಿಯಲ್ಲಿ ಈ ವಾರ ಆರಂಭವಾಗಲಿದೆ.

ಮತ್ತೊಂದೆಡೆ ಸುದೀಪ್ ಅವರ ಮುಂದಿನ ಚಿತ್ರಕ್ಕೆ ಲಕ್ಷ್ಮಿ ರೈ ಪ್ರಮುಖ ಪಾತ್ರದಲ್ಲಿ ನಟಿಸಲಿರುವುದರಿಂದ, ಭಾವನಾ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದೂ ವರದಿಯಾಗಿದೆ.

ಆದರೆ ಪವರ್ ಸ್ಟಾರ್ ಪುನೀತ್ ಜತೆ 'ಜಾಕಿ' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದ ಭಾವನಾ ಅವರ ಬೇಡಿಕೆ ಒಮ್ಮೆಲೆ ಏರತೊಡಗಿದೆ.

ಇತ್ತ ಸೂಪರ್ ಸ್ಟಾರ್ ಉಪೇಂದ್ರ ಅವರ ಮುಂದಿನ ಚಿತ್ರಕ್ಕೂ ಭಾವನಾ ಅವರೇ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಯೂ ಇತ್ತೀಚೆಗೆ ಕೇಳಿಬಂದಿತ್ತು. ಆ ಚಿತ್ರದ ಚಿತ್ರೀಕರಣ ಫೆಬ್ರವರಿಯಲ್ಲೇ ಆರಂಭವಾಗಬೇಕಿತ್ತು. ಆದರೆ 'ಸೂಪರ್' ಚಿತ್ರದ ತೆಲುಗು ವರ್ಷನ್‌ನಲ್ಲಿ ಉಪೇಂದ್ರ ಬ್ಯುಸಿಯಾಗಿರುವುದರಿಂದ ಹೊಸ ಚಿತ್ರ ಇನ್ನೂ ತಡವಾಗಲಿದೆ.

ನಟನೊಬ್ಬನನ್ನು ಪ್ರೀತಿಸುತ್ತಿದ್ದೇನೆ, ಆದರೆ ಯಾರು ಅಂತ ಮಾತ್ರ ಹೇಳಲ್ಲ ಎಂದು ಪತ್ರಿಕೆಯೊಂದಕ್ಕೆ ಹೇಳಿಕೆ ಕೊಟ್ಟಿದ್ದೇ ತಡ, ಅತ್ತ ಕೇರಳದಲ್ಲಿ ಪೋಷಕರು ಗಂಡು ಹುಡುಕುತ್ತಿದ್ದಾರೆ ಎಂದೆಲ್ಲ ಸುದ್ದಿಯಾಗಿತ್ತು. ಇದಕ್ಕೆ ಭಾವನಾ ಗರಂ ಆಗಿ ಈಗ ಮದುವೆ ಆಗಲ್ಲಾ ಎಂದಿದ್ದೂ ಸುದ್ದಿಯಾಗಿತ್ತು. ಆದರೆ ಈ ಎಲ್ಲಾ ಬೆಳವಣಿಗೆಯಿಂದ ಮದುವೆ ತಡವಾಗುತ್ತಾ ಇದೆ ಅನ್ನೋದು ಮಾತ್ರ ಅವರ ಖಾಸಗಿ ವಿಷಯ.
ಇವನ್ನೂ ಓದಿ