ವಿಷ್ಣುವರ್ಧನ ಹೆಸರಲ್ಲೇ ಚಿತ್ರ ಬಿಡುಗಡೆ ಮಾಡುವೆ: ದ್ವಾರ್ಕಿ!
PR
ಯಾರು ಏನೇ ಹೇಳಲಿ, ಏನೇ ಹೋರಾಡಲಿ, ನಾನು ನಿರ್ಮಿಸುತ್ತಿರುವ ವಿಷ್ಣುವರ್ಧನ ಚಿತ್ರ ಅದೇ ಶೀರ್ಷಿಕೆಯಲ್ಲಿಯೇ ತೆರೆಗೆ ಬರಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಇಷ್ಟಪಟ್ಟು ಇಟ್ಟ ಈ ಶೀರ್ಷಿಕೆಯನ್ನು ಎಷ್ಟು ಕಷ್ಟಪಟ್ಟಾದರೂ ಸರಿ ತಂದೇ ತರುತ್ತೇನೆ.
ಹೀಗೆ ಅಬ್ಬರಿಸಿದವರು ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್. ಸುದೀಪ್ ನಾಯಕರಾಗಿ ನಟಿಸುತ್ತಿರುವ, ದ್ವಾರಕೀಶ್ ನಿರ್ಮಾಣ, ನಿರ್ದೇಶನದ ವಿಷ್ಣುವರ್ಧನ ಚಿತ್ರ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. ನಟ ವಿಷ್ಣುವರ್ಧನ್ ಕುಟುಂಬ ಈ ಟೈಟಲ್ಲನ್ನು ದ್ವಾರಕೀಶ್ ಬಳಸಬಾರದು ಎಂದು ವಾಣಿಜ್ಯ ಮಂಡಳಿಗೆ ದೂರು ನೀಡಿತ್ತು.
ಆದರೆ, ಇದೀಗ ಮತ್ತೆ ಅಬ್ಬರಿಸಿರುವ ದ್ವಾರಕೀಶ್ ಈ ಟೈಟಲ್ಲನ್ನು ಯಾವುದೇ ಕಾರಣಕ್ಕೂ ಬಿಡಲ್ಲ ಅಂದಿದ್ದಾರೆ. ಶೀರ್ಷಿಕೆ ಕೈಬಿಡುವ ಅನಿವಾರ್ಯ ನನಗೆ ಬಂದಿಲ್ಲ. ಹೇಗಾದರೂ ಮಾಡಿ ಟೈಟಲ್ ಉಳಿಸಿಕೊಳ್ಳುತ್ತೇನೆ. ಇದೇ ಹೆಸರಿನಲ್ಲಿ ಚಿತ್ರ ಮಾಡಿ ಮುಗಿಸುತ್ತೇನೆ ನೋಡುತ್ತಿರಿ ಎನ್ನುತ್ತಾರೆ ದ್ವಾರಕೀಶ್. ನಾನು ಈ ಚಿತ್ರದ ಶೀರ್ಷಿಕೆಯನ್ನು ಅನ್ಯಾಯ ಹಾಗೂ ಭಲಾತ್ಕಾರದಿಂದ ಪಡೆಯುವುದಿಲ್ಲ. ಅಗತ್ಯ ಬಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ. ಇನ್ನೂ ಅಗತ್ಯ ಎನಿಸಿದರೆ ಧರಣಿಗೂ ಕೂರಲು ಸಿದ್ಧ ಎಂದಿದ್ದಾರೆ.
ಅಂತಿಮವಾಗಿ ಶೀರ್ಷಿಕೆಗಾಗಿ ನಾನು ಸತ್ಯಾಗ್ರಹ ಬೇಕಾದರೂ ನಡೆಸುತ್ತೇನೆ ಎನ್ನುವ ಮಟ್ಟಕ್ಕೆ ಇವರು ಬಂದಿದ್ದಾರೆ. ಯಾರ ಮನಸ್ಸಿಗೂ ನೋವಾಗದ ರೀತಿ ಚಿತ್ರದ ಟೈಟಲ್ ಪಡೆಯುವುದು ನನ್ನ ಉದ್ದೇಶ. ಈ ಹೆಸರಿನ ಹಿಂದೆ ಬಿದ್ದು, ರಾಜಕೀಯ ಮಾಡುವ ಅಗತ್ಯವಾದರೂ ಏನಿದೆ? ಈ ಹೆಸರಿಟ್ಟು ಚಿತ್ರ ಮಾಡಬಾರದು ಎಂದು ವಾದಿಸುವುದು ಎಷ್ಟು ಸರಿ. ಉತ್ತಮ ಹೆಸರನ್ನು ಯಾರು, ಎಲ್ಲಿ ಬೇಕಾದರೂ ಬಳಸಿಕೊಳ್ಳಬಹುದು. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಅಲ್ಲದೇ ವಿಷ್ಣುವರ್ಧನ ಅನ್ನುವ ಹೆಸರು ಒಂದು ಕುಟುಂಬಕ್ಕೆ ಸೀಮಿತವಾದುದಲ್ಲ ಎನ್ನುತ್ತಾರೆ.