ಅನೇಕ ಚಿತ್ರಗಳು ಕೈಯಲ್ಲಿದ್ದು ನಟ-ನಿರ್ದೇಶಕ ಕಿಚ್ಚ ಸುದೀಪ್ ಚಿತ್ರ ರಂಗದಲ್ಲಿ ಬ್ಯುಸಿಯಾಗಿದ್ದಾರಾದರೂ ರಾಜಕೀಯ ರಂಗ ಪ್ರವೇಶಿಸುವ ನಿರ್ಧಾರವನ್ನು ಅವರು ಈಗಾಗಲೇ ಕೈಗೊಂಡು ಬಿಟ್ಟಿದ್ದಾರೆ.
'ಇಂದು ನಾನು ಈ ಸ್ಥಾನಕ್ಕೆ ಬಂದು ಖ್ಯಾತನಾಗಿದ್ದೇನಾದರೆ ಅದಕ್ಕೆ ಜನರೇ ಕಾರಣ. ಜನರಿಗೆ ಪ್ರಾಮಾಣಿಕ ಸೇವೆ ಸಲ್ಲಿಸುವ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೇನೆ. ಆದುದರಿಂದ ನಾನು ರಾಜಕೀಯ ಪ್ರವೇಶಿಸುವ ನಿರ್ಧಾರ ಕೈಗೊಂಡಿರುವುದು ನಿಜ' ಎಂದಿದ್ದಾರೆ ಸುದೀಪ್.
'ಈಗಿನ ರಾಜಕೀಯ ಪರಿಸ್ಥಿತಿಯೂ ನಿರಾಶಾದಾಯಕವಾಗಿದೆ. ದಿನ ಬೆಳಗಾದರೆ ಒಂದಲ್ಲ ಒಂದು ಹಗರಣ ಬಯಲಾಗುತ್ತಲೇ ಇದೆ. ಭ್ರಷ್ಟಾಚಾರ ಎಲ್ಲೆಡೆ ಹೆಚ್ಚುತ್ತಲೇ ಇದೆ. ಜನಸಾಮಾನ್ಯರ ಬಗ್ಗೆ ಕಾಳಜಿ ವಹಿಸುವವರೇ ಇಲ್ಲವಾಗಿದೆ. ಜನಸಾಮಾನ್ಯರ ಸೇವೆ ಮಾಡಬೇಕೆಂಬ ನನ್ನ ಉದ್ದೇಶವೇ ರಾಜಕೀಯ ರಂಗ ಪ್ರವೇಶಿಸಲು ಪ್ರೇರಣೆ ನೀಡಿದೆ' ಎಂದಿದ್ದಾರೆ ಸುದೀಪ್.
ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸುದೀಪ್ ಅವರನ್ನು ಈಗಾಗಲೇ ಸಂಪರ್ಕಿಸಿವೆಯಾದರೂ ಯಾವ ಪಕ್ಷವನ್ನು ಸೇರಬೇಕೆಂಬ ನಿರ್ಧಾರವನ್ನು ಸುದೀಪ್ ಇನ್ನೂ ಮಾಡಿಲ್ಲ.
ಮುಂದಿನ ತಿಂಗಳು ನಡೆಯಲಿರುವ ದಾವಣಗೆರೆ ವಿಧಾಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸುದೀಪ್ ನಿರ್ಧರಿಸಿದ್ದು 'ರಾಜಕೀಯ ಪ್ರವೇಶಿಸಿದರೆ ಚಿತ್ರರಂಗಕ್ಕೆ ವಿದಾಯ ಹೇಳುತ್ತೇನೆ' ಎಂದಿದ್ದಾರೆ ಸುದೀಪ್.
'ಅಧಿಕಾರದ ಸುಖ ಅನುಭವಿಸಲು ನಾನು ರಾಜಕಿಯ ರಂಗಕ್ಕೆ ಹೋಗುತ್ತಿಲ್ಲ. ಶ್ರೀಸಾಮಾನ್ಯನಿಗೆ ಏನಾದರೂ ಒಳ್ಳೆಯದು ಮಾಡಬೇಕೆಂಬುದೇ ನನ್ನ ಹಂಬಲ' ಎಂದು ಒತ್ತಿ ಹೇಳಿದ್ದಾರೆ ಕಿಚ್ಚ ಸುದೀಪ್.