ಅತ್ತ ದ್ವಾರಕೀಶ್ ನಿರ್ಮಾಣದ 'ವಿಷ್ಣುವರ್ಧನ' ಚಿತ್ರದ ಶೀರ್ಷಿಕೆಯ ಮೊದಲಿಗೆ ರಾಜಾ ಅಥವಾ ವೀರ ಪದ ಸೇರಿಸಿಕೊಳ್ಳುವ ಮೂಲಕ ವಿವಾದ ಬಗೆಹರಿಯುವ ಲಕ್ಷಣ ಗೋಚರಿಸುತ್ತಿರುವ ವೇಳೆಯಲ್ಲಿಯೇ ಈಗ 'ವಿಷ್ಣು' ಟೈಟಲ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನಟ-ನಿರ್ದೇಶಕ ಅಭಿಜಿತ್ ಅವರಿಗೆ ನೀಡಿದೆ.
ಒಂದು ವರ್ಷದ ಹಿಂದೆಯೇ ಈ ಟೈಟಲನ್ನು ರಿಜಿಸ್ಟರ್ ಮಾಡಿಸಿಕೊಂಡು ಸಿನೆಮಾ ಮಾಡುವ ಯೋಜನೆ ಹಾಕಿಕೊಂಡಿದ್ದ ಅಭಿಜಿತ್ ಕೊನೆಗೂ ಈಗ ಈ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲಿದ್ದಾರೆ.
'ವಿಷ್ಣು' ಅಭಿಜಿತ್ ನಿರ್ದೇಶನದ ಎರಡನೇ ಚಿತ್ರ. ಇಲ್ಲಿ ಕಥೆ, ಚಿತ್ರಕಥೆ ಕೂಡಾ ಅಭಿಜಿತ್ ಅವರದೇ. ಈ ಚಿತ್ರದಲ್ಲಿ ಅಭಿಜಿತ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ರೋಹಿಣಿ ಅಭಿಜಿತ್ ನಿರ್ಮಾಣದ ಸಾರಥ್ಯ ವಹಿಸಿಕೊಂಡಿದ್ದಾರೆ.
'ಇದೊಂದು ಪಕ್ಕಾ ಆಕ್ಷನ್, ಕಾಮಿಡಿ ಮತ್ತು ಸೆಂಟಿಮೆಂಟ್ ಚಿತ್ರ. ವಿಷ್ಣು ಎಂಬುದು ಪಾತ್ರವೊಂದರ ಹೆಸರಷ್ಟೇ. ಈಗಿನ ವಾಸ್ತವತೆಯ ಕೆಲವು ಅಂಶಗಳು ಚಿತ್ರದಲ್ಲಿ ಸಮ್ಮಿಳಿತಗೊಂಡಿವೆ' ಎಂಬುದು ಅಭಿಜಿತ್ ಹೇಳಿಕೆ.
ಹಿರಿಯ ನಟಿ ಗೀತಾ ಈ ಚಿತ್ರದ ಮೂಲಕ ಮತ್ತೊಂದು ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಬಹಳ ವರ್ಷಗಳ ಬಳಿಕ ಗೀತಾ ನಟಿಸುತ್ತಿದ್ದಾರೆ. ಅಭಿಜಿತ್ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಗೀತಾ ಅವರ ಈ ಪಾತ್ರ ಚಿತ್ರದ ಹೈಲೈಟ್‌ಗಳಲ್ಲೊಂದು ಎನ್ನುತ್ತಾರೆ ನಿರ್ದೇಶಕ ಅಭಿಜಿತ್.
ಚಿತ್ರಕ್ಕೆ ಇಬ್ಬರು ನಾಯಕಿಯರು. ಸದ್ಯಕ್ಕೆ ಅವರ ಆಯ್ಕೆ ಪ್ರಕ್ರಿಯೆ ಸಾಗಿದೆ. ಉಳಿದಂತೆ ಪಯಣ ರವಿಶಂಕರ್, ಬುಲೆಟ್ ಪ್ರಕಾಶ್, ಸತ್ಯಪ್ರಕಾಶ್ ಮುಂತಾದವರ ತಾರಾ ಬಳಗವಿದೆ.
ಕೃಪಾಕರ್ ಸಂಗೀತಾ, ಮನೋಹರ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ, ರಾಮಚಂದ್ರುಡು ಅವರು ಬರೆದ ಸಂಭಾಷಣೆ ಈ ಚಿತ್ರಕ್ಕಿದೆ. ಐದು ಹಾಡುಗಳು ಹಾಗೂ ಐದು ಫೈಟ್ಸ್ ಚಿತ್ರದಲ್ಲಿರಲಿವೆ. ವಿಷ್ಣು ಚಿತ್ರದ ಮುಹೂರ್ತ ಮೇ 23ರಂದು ಜರುಗಲಿದೆ.