ಅದ್ಭುತ ಪ್ರೇಮ ಕಾವ್ಯ ಎಂದು ಗಾಂಧಿನಗರದ ಸದೃದಯಿಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿರುವ, ಇನ್ನಷ್ಟೇ ಬಿಡುಗಡೆಯಾಗಬೇಕಿರುವ ನಾಗಶೇಖರ್ ಕನಸಿನ ಕೂಸು 'ಸಂಜು ವೆಡ್ಸ್ ಗೀತಾ'ದಲ್ಲಿ ನಾಯಕಿಯಾಗಿರುವ ರಮ್ಯಾ ಸಂಭಾವನೆಯನ್ನೇ ಪಡೆದಿಲ್ಲವಂತೆ!
ಹೀಗೊಂದು ಸುದ್ದಿ ದೊಡ್ಡದಾಗಿ ಕೇಳಿ ಬರುತ್ತಿದೆ. ಕೇವಲ ರಮ್ಯಾ ಮಾತ್ರವಲ್ಲ, ನಾಯಕ ಶ್ರೀನಗರ ಕಿಟ್ಟಿ, ರಂಗಾಯಣ ರಘು, ಶರಣ್ ಮತ್ತು ಅವಿನಾಶ್ ಕೂಡ ಉಚಿತವಾಗಿ ನಟಿಸಿದ್ದಾರೆ ಎಂದು ಸ್ವತಃ ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಇದು ಎಷ್ಟು ನಿಜ, ಎಷ್ಟು ಸುಳ್ಳು ಎನ್ನುವುದು ಖಚಿತವಾಗಿಲ್ಲ.
ಸಾಮಾನ್ಯವಾಗಿ ರಮ್ಯಾ ಯಾವುದೇ ಚಿತ್ರದಲ್ಲೂ ಕಡಿಮೆ ಸಂಭಾವನೆಗೆ ನಟಿಸುವುದಿಲ್ಲ. ಅದೇ ಕಾರಣದಿಂದ ಹಲವು ಚಿತ್ರಗಳನ್ನು ಅವರು ಕಳೆದುಕೊಂಡದ್ದೂ ಇದೆ, ಕೋಳಿ ಜಗಳ ಮಾಡಿದ್ದಿದೆ. ಅಂತಹ ರಮ್ಯಾ ಈ ಚಿತ್ರದಿಂದ ಪ್ರತಿಫಲವನ್ನೇ ಪಡೆದಿಲ್ಲವೆಂದರೆ ಅಚ್ಚರಿಯಾಗದಿರುವುದೇ?
PR
ಇನ್ನು ಚಿತ್ರದಲ್ಲಿ 'ರಮ್ಯಾ ಅವರದ್ದು ನಾಯಕಿ ಪಾತ್ರ ಮಾತ್ರವಲ್ಲ, ಆಕೆ ನಿರ್ಮಾಪಕಿಯೂ ಹೌದು' ಎಂಬ ಸುದ್ದಿಗಳು ಸುಳ್ಳು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. 'ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅರ್ಪಿಸುವ' (Sandalwood queen Ramya presents) ಎಂದು ಪೋಸ್ಟರುಗಳಲ್ಲಿ ಹಾಕಿಕೊಂಡಿರುವುದು, ಆಕೆ ನೀಡಿರುವ ಸಹಕಾರಕ್ಕಾಗಿ. ನನ್ನ ಕನಸಿನಂತೆ ಚಿತ್ರ ಮೂಡಿ ಬರಲು ಅವರು ಕೂಡ ಕಾರಣರು ಎನ್ನುವುದು ನಾಗಶೇಖರ್ ಮಾತು.
ಪ್ರಮುಖ ನಟ-ನಟಿಯರು ಸಂಭಾವನೆ ಪಡೆದಿಲ್ಲ ಎಂದ ಮಾತ್ರಕ್ಕೆ ಇದು ಕಡಿಮೆ ಬಜೆಟ್ ಚಿತ್ರ ಎಂದು ಯಾರಾದರೂ ಅಂದುಕೊಂಡರೆ ಅದು ತಪ್ಪಾಗುತ್ತದೆ. ಇದುವರೆಗೆ ನಾಲ್ಕೂವರೆ ಕೋಟಿ ರೂಪಾಯಿ ಖರ್ಚಾಗಿದೆಯಂತೆ!
ಕೈದಿಯ ಪ್ರೇಮಪತ್ರವೇ ಸ್ಫೂರ್ತಿ... ಬೆಂಗಳೂರಿನ ಸೆಂಟ್ರಲ್ ಜೈಲ್ ಎದುರುಗಡೆ ಪುನೀತ್ ರಾಜ್‌ಕುಮಾರ್ ಅವರ 'ವೀರ ಕನ್ನಡಿಗ' ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸಂದರ್ಭವದು. ಸ್ವತಃ ವರನಟ ಡಾ. ರಾಜ್‌ಕುಮಾರ್ ಕೂಡ ಚಿತ್ರೀಕರಣ ವೀಕ್ಷಣೆಗೆ ಬಂದಿದ್ದರು. ಆ ಚಿತ್ರದಲ್ಲಿ ಈಗ ನಿರ್ದೇಶಕರಾಗಿರುವ, ಆಗಿನ ಹಾಸ್ಯನಟ ನಾಗಶೇಖರ್ ಅವರದ್ದೂ ಒಂದು ಚಿಕ್ಕ ಪಾತ್ರವಿತ್ತು.
ಆಗ ಜೈಲಿನ ಗೋಡೆಗಳ ನಡುವಿನ ಸಂದಿಯಲ್ಲಿ ಕಾಗದವೊಂದು ನಾಗಶೇಖರ್‌ಗೆ ಸಿಕ್ಕಿತ್ತು. ಸುಮ್ಮನೆ ಬಿಡಿಸಿ ನೋಡಿದಾಗ, ಅದು ಪ್ರೇಮಪತ್ರವಾಗಿತ್ತು. ಯಾರೋ ಕೈದಿಯೊಬ್ಬ ತನ್ನ ಪ್ರಿಯತಮೆಗೆ ಜೈಲಿನಲ್ಲೇ ಪತ್ರ ಬರೆದು, ಅದನ್ನು ತಲುಪಿಸಲಾಗದೆ ಬಿಟ್ಟು ಹೋಗಿದ್ದಿರಬಹುದು.
ಸುಂದರ ಅಕ್ಷರಗಳಿದ್ದ ಪತ್ರದ ಮೊದಲೆರಡು ಸಾಲುಗಳನ್ನು ಓದಿದಾಗ ಆಸಕ್ತಿ ಕೆರಳಿತ್ತು. ಇಡೀ ಪತ್ರ ಓದಿದ ನಂತರ ಆ ಅನಾಮಿಕ ಕೈದಿಯೊಳಗಿನ ಪ್ರೀತಿ, ಆತನ ಚಡಪಡಿಕೆಗಳು ಬಾಧಿಸಿದವು. ಅದೇ ಕಾರಣದಿಂದ ನನ್ನಲ್ಲಿ ಚಿತ್ರದ ಕಥೆಯೊಂದು ಹುಟ್ಟಿಕೊಂಡಿತು. ಆತ ಯಾರು, ಎಲ್ಲಿದ್ದಾನೆ ಎನ್ನುವ ಯಾವ ವಿವರವೂ ನನ್ನಲ್ಲಿಲ್ಲ ಎಂದು ನಿರ್ದೇಶಕ ನಾಗಶೇಖರ್ ಹೇಳುತ್ತಾರೆ.
ಅಂದ ಹಾಗೆ, ಆ ಪತ್ರ ಈಗ ನಾಗಶೇಖರ್ ಕೈಯಲ್ಲಿಲ್ಲ. ಬಾಡಿಗೆ ಮನೆಯಲ್ಲಿದ್ದ ಅವರು, ಶಿಫ್ಟ್ ಮಾಡುವ ಹೊತ್ತಿನಲ್ಲಿ ಕಳೆದುಕೊಂಡಿದ್ದಾರೆ!