ಗಂಡುಬೀರಿ ಎಂಬ ಬಿರುದನ್ನು ಮುಲಾಜಿಲ್ಲದೆ ಸ್ವೀಕರಿಸಿ ಕನ್ನಡ ಚಿತ್ರರಂಗದಲ್ಲಿ ಇನ್ನೂ ಹಿಡಿತವನ್ನು ಹೊಂದಿರುವ ನಟಿ ಎಂದರೆ ರಮ್ಯಾ ಬಿಟ್ಟು ಇನ್ಯಾರಿದ್ದಾರೆ? ಅವರ ಕಿರಿಕ್‌ಗಳೇನೇ ಇದ್ದರೂ, ಕ್ವಾಲಿಟಿ ಚಿತ್ರಗಳನ್ನು ಕೊಟ್ಟವರ ಸಾಲಿನಲ್ಲಿ ಮೊದಲಿನವರು ಎಂಬ ಶ್ಲಾಘನೆ ಇದ್ದೇ ಇದೆ. ಅಂತಹ ರಮ್ಯಾಗೆ ಹುಟ್ಟುಹಬ್ಬ, ಅದೂ 29ನೇಯದ್ದು!
ಹೌದು, ನಮ್ಮ ನಿಮ್ಮೆಲ್ಲರ ನೆಚ್ಚಿನ ನಟಿ, ಲಕ್ಕಿ ಸ್ಟಾರ್ ಖ್ಯಾತಿಯ ರಮ್ಯಾ 29 ವಸಂತಗಳನ್ನು (1981, ನವೆಂಬರ್ 29) ಪೂರೈಸಿದ್ದಾರೆ. ಈಗ ಅವರು ಸಾಗುತ್ತಿರುವುದು 30ರತ್ತ. ಈ ಹೊತ್ತಲ್ಲೂ ಬರೋಬ್ಬರಿ ಎಂಟು ಚಿತ್ರಗಳಲ್ಲಿ ಅವರು ನಾಯಕಿಯಾಗಿ ನಟಿಸುತ್ತಿರುವುದು ವಿಶೇಷವಲ್ಲದೆ ಮತ್ತೇನು?
ಅತ್ತ ಪರಭಾಷೆಯತ್ತ ಕಣ್ಣು ಹಾಯಿಸಿದರೆ, ತಮಿಳಿನಲ್ಲಿ ಜೀವಾ ನಾಯಕನಾಗಿರುವ 'ಸಿಂಗಂ ಪುಲಿ' ಹಾಗೂ ಸತ್ಯಾ ನಾಯಕನಾಗಿರುವ 'ಕಾದಲ್ ಟು ಕಲ್ಯಾಣಂ' ರಮ್ಯಾ ಕೈಯಲ್ಲಿರುವ ಪ್ರಮುಖ ಚಿತ್ರಗಳು.
ಇಷ್ಟೊಂದು ಚಿತ್ರಗಳನ್ನು ಒಪ್ಪಿಕೊಂಡಿರುವ, ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ರಮ್ಯಾ ತನ್ನ ಹುಟ್ಟುಹಬ್ಬದ ದಿನದಂದು ಬೆಂಗಳೂರಿನಲ್ಲಿ ಇಲ್ಲ ಎನ್ನುವುದೇ ಬೇಸರ ವಿಷಯ.
ಹೌದು, ರಮ್ಯಾ ತನ್ನ ಹುಟ್ಟುಹಬ್ಬಕ್ಕೆ ಈ ಬಾರಿ ತವರಿನಲ್ಲಿ ಇಲ್ಲ. ಚಿತ್ರೀಕರಣದ ಕಾರಣದಿಂದ ಅವರು ಪ್ರಸಕ್ತ ವಿದೇಶದಲ್ಲಿರುವುದರಿಂದ (ಇಸ್ತಾಂಬುಲ್) ಕೆಲ ದಿನಗಳ ಹಿಂದೆಯೇ ಟ್ವಿಟ್ಟರಿನಲ್ಲಿ 'ನಿರೀಕ್ಷಣಾ ಜಾಮೀನು' ಪಡೆದಿದ್ದಾರೆ. ಆಡಂಬರವಿಲ್ಲದ ಹುಟ್ಟುಹಬ್ಬವನ್ನು ಆಚರಿಸಲು ತಾನು ಬಯಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಅವರು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೊಟೇಲಿನಲ್ಲಿ ಅಭಿಮಾನಿಗಳೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಚಿತ್ರರಂಗದ ಹಲವು ಗಣ್ಯರು ಕೂಡ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇವೆಲ್ಲದಕ್ಕಿಂತ ಪ್ರಮುಖವಾದುದೆಂದರೆ, ಅವರು ತನ್ನ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿರುವುದು.
ಇದುವರೆಗೆ ಸರಿಸುಮಾರು 38 ಸಿನಿಮಾಗಳಲ್ಲಿ ಅಭಿನಯಿಸಿರುವ ರಮ್ಯಾ ಈ ಬಾರಿ ಅಭಿಮಾನಿಗಳಿಗೆ ಮುದ ನೀಡಿದ್ದು, ಜಸ್ಟ್ ಮಾತ್ ಮಾತಲ್ಲಿ, ಜೊತೆಗಾರ, ಕಿಚ್ಚ-ಹುಚ್ಚ ಮಾತ್ರ. ದುಃಖದ ವಿಚಾರವೆಂದರೆ ಈ ಮೂರೂ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಉತ್ತಮ ಗಳಿಕೆ ಮಾಡದೇ ಇರುವುದು. ನಟನೆ ಮತ್ತು ಚಿತ್ರಗಳ ಆಯ್ಕೆ ವಿಚಾರದಲ್ಲಿ ರಮ್ಯಾ ಸೋಲದೇ ಇದ್ದರೂ, ಹಿಟ್ ಚಿತ್ರ ನೀಡುವಲ್ಲಿ ವಿಫಲರಾಗಿದ್ದಾರೆ.
ಇರಲಿ ಬಿಡಿ, ಸೋಲು-ಗೆಲುವು ಯಾರಿಗೂ ತಿಳಿದಿರುವುದಿಲ್ಲ. ಅವೆಲ್ಲವೂ ಪ್ರೇಕ್ಷಕರಿಗೆ ಬಿಟ್ಟ ವಿಚಾರ. ಅವರು ಅಪ್ಪಿಕೊಂಡರೆ ಗೆಲುವು, ತಪ್ಪಿದರೆ ಸೋಲು ಕಟ್ಟಿಟ್ಟ ಬುತ್ತಿ.
'ಅಭಿ' ಚಿತ್ರದಿಂದ ಹಿಡಿದು ಮೊನ್ನೆ ಮೊನ್ನೆ ಬಿಡುಗಡೆಯಾದ 'ಕಿಚ್ಚ-ಹುಚ್ಚ'ದ ಕಮಲಿಯವರೆಗೆ ಇಷ್ಟಪಟ್ಟಿರುವ ಅಭಿಮಾನಿಗಳು ರಮ್ಯಾಗೊಂದು 'ಹ್ಯಾಪಿ ಬರ್ತ್ ಡೇ' ಹೇಳಿ ಬಿಡಿ. ಅವರ ಸಿನಿಮಾ ಜೀವನ ಇನ್ನಷ್ಟು ಉಜ್ವಲವಾಗಿರಲಿ ಎಂದು ಹಾರೈಸಿ.
ಹೀಗೆ ಹಾರೈಸಿದವರಿಗೆ ಟ್ವಿಟ್ಟರಿನಲ್ಲಿ ರಮ್ಯಾ ಸೋಮವಾರ ಬೆಳ್ಳಂಬೆಳಗ್ಗೆ ಧನ್ಯವಾದ ತಿಳಿಸಿದ್ದಾರೆ.