ನಿಜ ನಾಮಧೇಯ ದಿವ್ಯ ಸ್ಪಂದನ. ಆದರೆ ಇದಕ್ಕಿಂತ ಆಕೆಯನ್ನು ರಮ್ಯ ಎಂದು ಕರೆದರೆ ಹೆಚ್ಚು ಜನರಿಗೆ ಅರ್ಥವಾದೀತೇನೋ. ಕನ್ನಡದಲ್ಲಿ ರಮ್ಯ ಎಂದೇ ಖ್ಯಾತಿವೆತ್ತಿರುವ ದಿವ್ಯ ಸ್ಪಂದನಾಗೆ ಈಗ ಕರೆಕ್ಟಾಗಿ 28ರ ಹರೆಯ. 1981ರ ನವೆಂಬರ್ 29ರಂದು ಮಂಡ್ಯದಲ್ಲಿ ಜನಿಸಿದ ರಮ್ಯ ತನ್ನ ಅಭಿನಯ ಚಾತುರ್ಯದ ಜೊತೆಜೊತೆಗೇ ನೇರಾನೇರ ಮಾತು, ನಡೆನುಡಿಗೆ ಪ್ರ(ಕು)ಖ್ಯಾತಿ.
ಕಲಿತಿದ್ದು ತಮಿಳುನಾಡಿನ ಖ್ಯಾತ ಪ್ರವಾಸಿ ತಾಣ ಊಟಿಯ ಸೈಂಟ್ ಹಿಲ್ಡಾ ಸ್ಕೂಲ್‌ನಲ್ಲಿ. ಕಾಲೇಜು ಓದಿದ್ದು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ. ಶಾಲಾ ದಿನಗಳಲ್ಲೇ ಹಲವು ಸ್ಟೇಜ್ ಶೋ, ಡ್ಯಾನ್ಸ್‌ಗಳಲ್ಲಿ ಅಭಿನಯಿಸಿ ಅನುಭವವಿರುವ, ಶಹಬ್ಬಾಸ್‌ಗಿರಿ ಪಡೆದಿದ್ದ ರಮ್ಯಾಗೆ ಚಿತ್ರನಟನೆಯೇನೂ ಕಷ್ಟವಾಗಲೇ ಇಲ್ಲ. ಕನ್ನಡ ಹಾಗೂ ತಮಿಳು ಎರಡೂ ಭಾಷೆಗಳಲ್ಲಿ ಪ್ರಸಿದ್ಧಿಯ ಉತ್ತುಂಗಕ್ಕೇರಿದ ರಮ್ಯಾಳ ಪ್ಲಸ್ ಪಾಯಿಂಟ್ ತನ್ನ ಮಾತೃಭಾಷೆ ಕನ್ನಡವನ್ನು ಓದಲು ಬರೆಯಲು ಬರುವ ಹಾಗೆಯೇ ತಮಿಳಿನಲ್ಲೂ ಮಾತನಾಡಲು, ಬರೆಯಲು ಹಾಗೂ ಓದಲು ಬರುವುದು! ಕಾರಣ ಓದಿದ್ದು ಊಟಿಯಲ್ಲಿ!
ಪದವಿಯನ್ನು ಪೂರ್ಣಗೊಳಿಸಿದ ನಂತರ ದಿನೇಶ್ ಬಾಬು ನಿರ್ದೇಶನದ ಅಭಿ ಚಿತ್ರದಲ್ಲಿ ನಟಿಸಲು ಕರೆ ಬಂದಿತು. ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ನಾಯಕಿಯಾಗಿ ಉತ್ತಮ ನಟನೆಯ ಮೂಲಕ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾದಳು. ಚಿತ್ರ ಹಿಟ್ ಆಗುವುದರೊಂದಿಗೆ ಗೋಲ್ಟನ್ ಗರ್ಲ್, ಲೇಡಿ ಸೂಪರ್ ಸ್ಟಾರ್, ಲಕ್ಕಿ ಸ್ಟಾರ್ ಮತ್ತಿತರ ಬಿರುದಾವಳಿಗಳ್ನು ಮುಡಿಗೇರಿಸಿದ ರಮ್ಯ ಮತ್ತೆ ಹಿಂದೆ ನೋಡಬೇಕಾಗಲೇ ಇಲ್ಲ.
ಪ್ರೇಕ್ಷಕರು ಹಾಗೂ ಚಿತ್ರ ನಿರ್ಮಾಪಕರ ಅಚ್ಚುಮೆಚ್ಚಿನ ನಟಿಯಾದ ರಮ್ಯಾ ಈವರೆಗೆ ಪುನೀತ್ ರಾಜ್‌ಕುಮಾರ್ ಸುನೀಲ್ ರಾವ್ , ಸುದೀಪ್, ಮುರಳಿ, ಆದಿತ್ಯ ಉಪೇಂದ್ರ, ಧ್ಯಾನ, ವಿಜಯ್ ರಾಘವೇಂದ್ರ, ದರ್ಶನ್, ಪ್ರೇಮ್ ಮತ್ತಿತರ ನಾಯಕ ನಟರೊಂದಿಗೆ ನಟಿಸಿದ್ದಾರೆ. ತಮಿಳಿನಲ್ಲೂ ಸೂರ್ಯ, ಧನುಷ್ ಮತ್ತಿತರರೊಂದಿಗೆ ನಾಯಕಿಯಾಗಿ ಮನಸೆಳೆದಿದ್ದಾರೆ. ಅಭಿ, ಎಕ್ಸ್‌ಕ್ಯೂಸ್ ಮಿ, ರಂಗಾ ಎಸ್‌ಎಸ್‌ಎಲ್‌ಸಿ, ಕಂಠಿ, ಆಕಾಶ್, ಗೌರಮ್ಮ, ಅಮೃತಧಾರೆ, ಸೇವಂತಿ ಸೇವಂತಿ, ಜ್ಯೂಲಿ, ಜೊತೆ ಜೊತೆಯಲಿ, ತನನಂ ತನನಂ, ಅರಸು, ಮೀರಾ ಮಾಧವ ರಾಘವ, ಮುಸ್ಸಂಜೆ ಮಾತು ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದು, ದಿನೇಶ್ ಬಾಬು, ಪ್ರೇಮ್, ಯೋಗರಾಜ್ ಭಟ್, ಎಂ.ಎಸ್ ರಮೇಶ್, ನಾಗತಿಹಳ್ಳಿ ಚಂದ್ರಶೇಖರ್ ಅವರಂತಹ ಖ್ಯಾತ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿ ಖ್ಯಾತಿಯ ಉತ್ತುಂಗಕ್ಕೇರಿದರು.
WD
ದಿನಕರ್ ನಿರ್ದೇಶನದ ಜೊತೆ ಜೊತೆಯಲಿ ಚಿತ್ರದಲ್ಲಿ 'ನೆನಪಿರಲಿ' ಖ್ಯಾತಿಯ ಪ್ರೇಮ್ ಅವರೊಂದಿಗೆ ನಟಿಸಿ ಯಶಸ್ವಿ ಜೋಡಿಯ ಸ್ಥಾನವನ್ನು ಪಡೆದರು. ರೊಮ್ಯಾಂಟಿಕ್ ಚಿತ್ರಗಳಲ್ಲಿ ಮಾತ್ರವಲ್ಲದೇ ಅರಸು ಚಿತ್ರದಲ್ಲಿ ಭಾವನಾತ್ಮಕ ನಟನೆಯಲ್ಲೂ ತಮ್ಮ ಕಲಾಪ್ರತಿಭೆಯನ್ನು ಎತ್ತಿ ತೋರಿಸಿದ್ದಾರೆ. ಹಿಂದಿ ನಟ ದಿನೋ ಮೊರಿಯಾ ಜೊತೆಗೆ ಕನ್ನಡದಲ್ಲಿ ಜೂಲಿ ಚಿತ್ರದಲ್ಲಿ ಹಸಿಹಸಿಯಾಗಿ ಬಿಸಿ ಬಿಸಿಯಾಗಿಯೂ ನಟಿಸಿದ ಅನುಭವ ರಮ್ಯಾಗಿದೆ. ಅಮೃತಧಾರೆ ಚಿತ್ರದಲ್ಲಿ ಸಣ್ಣ ದೃಶ್ಯವೊಂದರಲ್ಲಿ ಬಾಲಿವುಡ್ ದಿಗ್ಗಜ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆಯೂ ನಟಿಸಿದ ರಮ್ಯ, ಸದ್ಯ ಪ್ರಕಾಶ್ ರೈ ನಿರ್ದೇಶನದ ನಾನು ನನ್ನ ಕನಸು ಚಿತ್ರದಲ್ಲಿ ಬ್ಯುಸಿ. ಅರಮನೆ ಖ್ಯಾತಿಯ ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ ಚಿತ್ರದಲ್ಲೂ ಶ್ರೀನಗರ ಕಿಟ್ಟಿ ಜೊತೆಗೆ ರಮ್ಯ ಬಣ್ಣಹಚ್ಚಿದ್ದಾರೆ.
ದಿವ್ಯ ಸ್ಪಂದನಳಾದರೂ ಅದೃಷ್ಟ ದೇವತೆಯ ವರಪ್ರಸಾದವೆಂಬಂತೆ ರಮ್ಯ ಎಂಬ ಹೆಸರಿನಲ್ಲಿ ನಟಿಸುತ್ತಾ ಬಂದ ಚಿತ್ರವೆಲ್ಲ ಹಿಟ್ ಆಯಿತು. ಸೋತಿದ್ದು ಕಡಿಮೆಯೇ. ಈಕೆ ನಟಿಸಿದ ಚಿತ್ರಗಳ ಪೈಕಿ ಶೇ.90ರಷ್ಟು ಚಿತ್ರಗಳು ಹಿಟ್! ಹಾಗಾಗಿಯೇ ರಮ್ಯ ಕಾಲ್‌ಶೀಟ್ ಸಿಕ್ಕರೆ ನೆಮ್ಮದಿಯಿಂದ ಆರಾಮವಾಗಿ ಹಣ ಹೂಡುವ ನಿರ್ಮಾಪಕರಿಗೇನೂ ಕೊರತೆಯಿರಲಿಲ್ಲ. ಈಗಲೂ ಇಲ್ಲ!
ರಮ್ಯ ತಮಿಳಿನಲ್ಲಿ ಕುತು ರಮ್ಯ ಎಂಬ ಅನ್ವರ್ಥದಿಂದಲೇ ಫೇಮಸ್ ನಟಿ. 2003ರಲ್ಲಿ ಕುತು ಚಿತ್ರದಲ್ಲಿ ನಟಿಸಿದಳು. ಚಿತ್ರ ಭಾರೀ ಹಿಟ್. ನಂತರ ಗಿರಿ ಚಿತ್ರದಲ್ಲಿ ನಟಿಸಿದ ನಂತರ 2007ರವರೆಗೂ ತಮಿಳಿಗೆ ಕಾಲಿಡಲಿಲ್ಲ. ಕನ್ನಡದಲ್ಲಿ ಈ ಸಮಯದಲ್ಲಿ ರಮ್ಯ ಬ್ಯುಸಿ. 2007ರಲ್ಲಿ ಪೊಳ್ಳಾದವನ್ ಚಿತ್ರದಲ್ಲಿ ಸೂಪರ್‌ಸ್ಟಾರ್ ರಜನೀಕಾಂತ್ ಅಳಿಯ ಧನುಷ್ ಜತೆಗೆ ನಟಿಸಿದಳು. ದೀಪಾವಳಿ ಸಮಯದಲ್ಲಿ ಬಿಡುಗಡೆಯಾದ ಈ ಚಿತ್ರ ಭರ್ಜರಿ ಹಿಟ್ ಆಯಿತು. ಸ್ವತಃ ರಜನೀಕಾಂತ್ ರಮ್ಯಾಳ ಪ್ರತಿಭೆಗೆ ಸೋತು ಹೋಗಿ ಭಾರೀ ಹೊಗಳಿದರಂತೆ. ನಂತರ ತಮಿಳಿನಲ್ಲಿ ಸೂರ್ಯ ಜತೆಗೆ ನಟಿಸಿದ ವಾರಣಂ ಆಯಿರಂ ಚಿತ್ರ ಕೂಡಾ ಭರ್ಜರಿ ಹಿಟ್ ಆಗಿದೆ.
MOKSHA
ಅತ್ಯಂತ ಹೆಚ್ಚು ಸಂಭಾವನೆ ಪಡೆವ ನಟಿಯರಲ್ಲಿ ರಮ್ಯಾಳದ್ದು ಎತ್ತರದ ಸ್ಥಾನ. ಈಕೆ ಚಿತ್ರವೊಂದಕ್ಕೆ ಸುಮಾರು 75 ಲಕ್ಷಕ್ಕೂ ಹೆಚ್ಚು ಸಂಭಾವನೆ ಪಡೆಯುತ್ತಾಳೆಂಬ ಮಾತು ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ. ಕನ್ನಡಕ್ಕೆ ಮುಂಗಾರು ಮಳೆ ಖ್ಯಾತಿಯ ಪೂಜಾ ಗಾಂಧಿ, ಮುದ್ದುಮುಖದ ಮನಸಾರೆ ಖ್ಯಾತಿಯ ಐಂದ್ರಿತಾ ರೇ ಮತ್ತಿತರ ಹಲವು ಯುವ ನಟಿಯರ ಆಗಮನವಾದರೂ, ಮುಂಬೈಯಿಂದ ಹಲವು ನಟಿಯರ ಆಮದಾಗುತ್ತಿದ್ದರೂ, ರಮ್ಯ ಬೇಡಿಕೆಗೇನೂ ಅಂಥ ಹೇಳಿಕೊಳ್ಳುವಂಥ ಆಪತ್ಕಾಲ ಬಂದಿಲ್ಲ ಎಂದರೆ ಅದು ರಮ್ಯಾಳ ಹೆಚ್ಚುಗಾರಿಕೆಯಲ್ಲದೆ ಮತ್ತಿನ್ನೇನಲ್ಲ. ಅಂದಿದ್ದ ನಂಬರ್ ವನ್ ಸ್ಥಾನ ಈಗ ಕನ್ನಡದಲ್ಲಿ ಕೈತಪ್ಪಿದರೂ ರಮ್ಯಾ ಕೈಯಲ್ಲಿ ಬೇಕಾದಷ್ಟು ಚಿತ್ರಗಳಿವೆ.
ಇಷ್ಟೆಲ್ಲಾ ಪ್ರಖ್ಯಾತಿಯ ಜೊತೆಜೊತೆಗೇ ರಮ್ಯಾ ಆಗಾಗ ವಿವಾದಗಳಲ್ಲಿ ಸಿಲುಕುವುದಕ್ಕೇನೂ ಕಡಿಮೆಯಿಲ್ಲ, ವರ್ಷಕ್ಕೆರಡು ಬಾರಿಯಾದರೂ ರಮ್ಯ ಏನಾದರೂ ರಂಪಾಟ ಮಾಡಿ ಪತ್ರಿಕೆಗಳಲ್ಲಿ ದೊಡ್ಡ ಹೆಡ್‌ಲೈನ್ ಗಿಟ್ಟಿಸುತ್ತಾಳೆ. ಇತ್ತೀಚೆಗಷ್ಟೇ ಜಸ್ಟ್ ಮಾತ್ ಮಾತಲಿ ಚಿತ್ರೀಕರಣದ ಸಂದರ್ಭ ನಟ ಸುದೀಪ್ ಹಾಗೂ ಕೊರಿಯೋಗ್ರಾಫರ್ ಹರ್ಷ ಜೊತೆ ರಂಪಾಟ ಮಾಡಿಕೊಂಡು ಕ್ಷಮೆ ಯಾಚಿಸಿದ ಸಂಗತಿ ಗೊತ್ತೇ ಇದೆ. ಅದರಿಂದಾಗಿಯೇ ಜಸ್ಟ್ ಮಾತ್ ಮಾತಲಿ ಚಿತ್ರತಂಡದಿಂದ ರಮ್ಯ ಹೊರಬಿದ್ದೂ ಆಗಿದೆ.
ಇಂತಿಪ್ಪ ರಮ್ಯಾ ಇಂಟರ್‌ನೆಟ್ ಪ್ರಿಯೆ. ತನ್ನ ಅಭಿಮಾನಿಗಳ ಜೊತೆಗೆ ಅಂತರ್ಜಾಲದಲ್ಲಿ ಸಂಪರ್ಕವನ್ನೂ ಸಾಧಿಸುತ್ತಾಳೆ. ಫೇಸ್‌ಬುಕ್, ಬ್ಲಾಗ್ ಮೂಲಕ ಸೂಶಿಯಲ್ ನೆಟ್‌ವರ್ಕಿಂಗ್ ಸೈಂಟ್‌ನಲ್ಲೂ ಇತರ ಹಿಂದಿ ನಟಿಯರಂತೆ ಮುಂದುವರಿದಿದ್ದಾಳೆ. ರಮ್ಯಾಗೆ ಹುಟ್ಟುಹಬ್ಬದ ಶುಭಾಷಯ ಹೇಳಲು ಇದು ಶುಭ ಸಮಯ.